ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ. ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (೨೬) ನಾಪತ್ತೆಯಾಗಿ ಇಂದಿಗೆ ಮೂರು ದಿನಗಳಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸೋಮವಾರ ರಾತ್ರಿ ೮ ಗಂಟೆ ವೇಳೆ ಶಿರಿಯ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಕರಾವಳಿ ಪೊಲೀಸರು ಅಲ್ಲಿಗೆ ತೆರಳಿದ್ದರು. ಈ ವೇಳೆ ಇಬ್ರಾಹಿಂ ಹೊಳೆಗೆ ಹಾರಿದ್ದು, ಮತ್ತಿಬ್ಬರು ದೋಣಿಯನ್ನು ಉಪೇಕ್ಷಿಸಿ ಪರಾರಿಯಾಗಿದ್ದಾರೆ.
ಇಬ್ರಾಹಿಂ ಹೊಳೆಗೆ ಹಾರಿದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಕ್ಷಣ ನಾಗರಿಕರು ಹಾಗೂ ಕರಾವಳಿ ಪೊಲೀಸರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗಿನಿಂದ ರಾತ್ರಿವರೆಗೆ ಕರಾವಳಿ ಪೊಲೀಸರು, ಮೀನು ಕಾರ್ಮಿಕರು ಹಾಗೂ ಸ್ಕೂಬಾ ಟೀಂ ಶೋಧ ನಡೆಸಿತ್ತು. ಆದರೆ ಇಬ್ರಾಹಿಂರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದ ಇಂದು ಮಂಜೇಶ್ವರ ಹಾಗೂ ನೀಲೇಶ್ವರದಿಂದ ಬಂದ ಕರಾವಳಿ ಪೊಲೀಸರ ಎರಡು ಬೋಟ್‌ಗಳ ಮೂಲಕ ಹೊಳೆಯಲ್ಲಿ ಶೋಧ ನಡೆಯುತ್ತಿದೆ. ಇದೇ ವೇಳೆ ನಾಪತ್ತೆಯಾದ ಇಬ್ರಾಹಿಂರ ಮನೆಗೆ ನಿನ್ನೆ ಮೀನುಗಾರಿಕೆ, ಬಂದರು ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನುಡಿದು ಮರಳಿದ್ದಾರೆ. ಸಚಿವರ ಜೊತೆಗೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ಹಲವರು ಉಪಸ್ಥಿತರಿದ್ದರು.






