ಕಲ್ಲಿಕೋಟೆ: ನರ್ಸಿಂಗ್ ಶಿಕ್ಷಣಕ್ಕೆಂದು ತಿಳಿಸಿ ಬೆಂಗಳೂರಿಗೆ ಹೋದ ಯುವತಿ ಸ್ನೇಹಿತನೊಂದಿಗೆ ದೆಹಲಿಯಲ್ಲಿ ವಾಸಿಸಿ ಮಾದಕ ವಸ್ತು ಮಾರಾಟ ದಂಧೆ ನಡೆಸುತ್ತಿರುವುದನ್ನು ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.
ತಿರುವನಂತಪುರ ಮಲಯನ್ ಕೀಳ್ ಪೊಟ್ಟಯಿಲ್ ಏಳಕ್ಕೋಡ್ ಎಂಬಲ್ಲಿನ ಸೂರ್ಯ (23) ಹಾಗೂ ನಿಲಂಬೂರ್ ಚಪ್ಪಾತ್ ಚೊಕ್ಕಾಡ್‌ನ ಅಜ್ಮಲ್ (32) ಎಂಬಿವರನ್ನು ಮಾದಕವಸ್ತು ಸಹಿತ ಸೆರೆಹಿಡಿಯಲಾಗಿದೆ. ಸೂರ್ಯ ನರ್ಸಿಂಗ್ ಶಿಕ್ಷಣಕ್ಕೆಂದು ತಿಳಿಸಿ ಬೆಂಗಳೂರಿಗೆ ತೆರಳಿದ್ದಳೆನ್ನಲಾಗಿದೆ. ಆದರೆ ಈಕೆ ಮಾದಕವಸ್ತು ಮಾಫಿಯಾಗಳ ಹಿಡಿತಕ್ಕೆ ಸಿಲುಕಿರುವುದು ಹೇಗೆ ಎಂಬುದು ಸ್ಪಷ್ಟಗೊಂಡಿಲ್ಲ. ಮೂರು ತಿಂಗಳ ಹಿಂದೆ ಕಲ್ಲಿಕೋಟೆ ಪಂದಿರಾಂಕಾವ್ ಎಂಬಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಕಿಲೋ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದರು. ಈ ಸಂಬಂಧ ಐದು ಮಂದಿಯನ್ನು ಸೆರೆ ಹಿಡಿಯಲಾಗಿತ್ತು. ಅವರನ್ನು ಪಂದಿರಾಂಕಾವ್ ಪೊಲೀಸರು ತನಿಖೆಗೊಳಪಡಿಸಿದಾಗ ಅಜ್ಮಲ್ ಹಾಗೂ ಸೂರ್ಯರ ಕುರಿತು ಮಾಹಿತಿ ಲಭಿಸಿತ್ತು. ಇದರಂತೆ ತನಿಖೆ ಮುಂದುವರಿಸಿದ ಪೊಲೀಸರು ಈ ಇಬ್ಬರನ್ನು ದೆಹಲಿಯಿಂದ ಕಸ್ಟಡಿಗೆ ತೆಗೆಯಲಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಮಾದಕವಸ್ತುಗಳನ್ನು ತೂಗುವ ಇಲೆಕ್ಟ್ರಾನಿಕ್ ತಕ್ಕಡಿ, ಮಾದಕವಸ್ತುಗಳನ್ನು ತುಂಬಿಸಲು ಉಪಯೋಗಿಸುವ ಪ್ಲಾಸ್ಟಿಕ್ ಕವರ್ ಗಳು ಪತ್ತೆಯಾಗಿವೆ. ಮೊಬೈಲ್ ಫೋನ್, ಪಾನ್‌ಕಾರ್ಡ್ ಮೊದಲಾ ದವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಬಂಧಿತನಾದ ಅಜ್ಮಲ್ ಈ ಹಿಂದೆಯೂ ಮಾದಕವಸ್ತು ಪ್ರಕರಣದಲ್ಲಿ ಸೆರೆಗೀಡಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ನರ್ಸಿಂಗ್ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದ ಸೂರ್ಯ ದೀರ್ಘಕಾಲದಿಂದ ಅಜ್ಮಲ್‌ನೊಂದಿಗೆ ದೆಹಲಿಯ ನೋಯ್ಡಾದಲ್ಲಿ ವಾಸಿಸುತ್ತಿದ್ದಳೆಂದು ತನಿಖೆಯಲ್ಲಿ ತಿಳಿದು ಬಂದಿದೆ.
ದೆಹಲಿಯಲ್ಲಿ ವಾಸಿಸುತ್ತಿದ್ದಾಗ ಇವರು ಮಾದಕವಸ್ತು ಮಾಫಿಯಾಗಳ ಮಧ್ಯವರ್ತಿಗಳಾಗಿ ಸೇರಿಕೊಂಡಿ ದ್ದರೆನ್ನಲಾಗುತ್ತಿದೆ. ಈ ಇಬ್ಬರು ಸೇರಿ ನಾಲ್ಕು ತಿಂಗಳೊಳಗೆ ಐದು ಕೋಟಿ ರೂಪಾಯಿಗಳ ಎಂಡಿಎಂಎ ವ್ಯವ ಹಾರ ನಡೆಸಿದ್ದಾರೆಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿಯೂ ಪೊಲೀಸರು ತಿಳಿಸುತ್ತಿದ್ದಾರೆ.
ಇವರನ್ನು ಪಂದಿರಾಂಕಾವ್ ಪೊಲೀಸ್ ಠಾಣೆಗೆ ತಲುಪಿಸಿ ಬಂಧನ ದಾಖಲಿಸ ಲಾಗಿದೆ. ಈ ದಂಧೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿ ದ್ದಾರೆಯೇ ಎಂಬುದನ್ನು ಇನ್ನಷ್ಟೇ ತನಿಖೆಯಲ್ಲಿ ತಿಳಿಯಬೇಕಾಗಿದೆ.






