ಕಾಸರಗೋಡು: ಪ್ರಿಯದರ್ಶಿನಿ ಯೋಜನೆಯಿಂದಾಗಿ ಸಂದಿಗ್ಧತೆ ಎದುರಿಸುವ ಖಾಸಗಿ ಬಸ್ ವಲಯವನ್ನು ಸಂರಕ್ಷಿಸಲು ಸರಕಾರ ತುರ್ತು ಮಧ್ಯಪ್ರವೇಶ ನಡೆಸಬೇಕೆಂದು ಆಗ್ರಹಿಸಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ನ ನೇತೃತ್ವದಲ್ಲಿ ಸೆಕ್ರೆಟರಿಯೇಟ್ ಮಾರ್ಚ್, ಧರಣಿ ನಡೆಸಲಾಯಿತು. ಅವೈಜ್ಞಾನಿಕವಾದ ಟೈಮ್ ಶೆಡ್ಯೂಲ್, ಕೆಎಸ್ಆರ್ಟಿಸಿಗೆ ಸರಕಾರ ನೀಡುವ ಅಪರಿಮಿತ ಪರಿಗಣನೆ, ರಾಷ್ಟ್ರೀಕರಣದ ಅವಗಣನೆ ಈ ವಲಯವನ್ನು ಪೂರ್ಣವಾಗಿ ಹಾನಿಗೊಳಿಸಿದೆ. ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಂಜೂರು ಮಾಡಿದಾಗ ಖಾಸಗಿ ಬಸ್ಗಳ ಸಂಗ್ರಹ ಅರ್ಧದಷ್ಟು ಕಡಿಮೆಯಾಗಿ ನೌಕರರಿಗೆ ವೇತನ ನೀಡಲು, ಡೀಸೆಲ್ ಹಾಕಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.
ಸರಕಾರ ನೇಮಕಗೊಳಿಸಿದ ಪದ್ಮಕುಮಾರ್ ಐಪಿಎಸ್ರ ನೇತೃತ್ವದಲ್ಲಿರುವ ತಜ್ಞ ಸಮಿತಿ ನೀಡಿದ ಶಿಫಾರಸುಗಳನ್ನು ತುರ್ತಾಗಿ ಜ್ಯಾರಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸೆಕ್ರೆಟರಿಯೇಟ್ ಮಾರ್ಚ್, ಧರಣಿ ನಡೆಸಲಾಗಿದ್ದು, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಅಧ್ಯಕ್ಷ ರಾಜು ಅಪ್ಸರ ಉದ್ಘಾಟಿಸಿದರು. ಬಸ್ ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ ಟಿ. ಕೃಷ್ಣನ್, ಕೋಶಾಧಿಕಾರಿ ರಾಜೇಶ್ ಯು, ಕೆ.ಎನ್. ಬಾಲಕೃಷ್ಣನ್, ಸಿ.ಎ. ಮುಹಮ್ಮದ್ ಕುಂಞಿ, ಕಾರ್ತಿಕ್ರಾಜ್, ಎಂ. ಹಸೈನಾರ್, ಎಸ್.ಕೆ. ಹಮೀದ್, ಸುಬ್ಬಣ್ಣ ಆಳ್ವ, ಎ.ವಿ. ಪ್ರದೀಪ್ ಕುಮಾರ್, ಕೆ.ವಿ. ರವಿ, ರಾಧಾಕೃಷ್ಣ ಎಸ್, ಪಿ.ಎ. ಮುಹಮ್ಮದ್ ಕುಂಞಿ, ದಿನೇಶ್ವರಿ, ರೇಖ ಮೊದಲಾದವರ ಸಹಿತ ನೂರಾರು ಮಂದಿ ಜಿಲ್ಲೆಯಿಂದ ಭಾಗವಹಿಸಿದರು.






