ಕಾರ್ಗೋ ಮೂಲಕ ಕಾಸರಗೋಡಿಗೆ ಸಾಗಿಸಲೆತ್ನಿಸಿದ 9 ಕೋಟಿ ಮೌಲ್ಯದ ಚಿನ್ನ ಪತ್ತೆ: ಓರ್ವ ಸೆರೆ

ಕಾಸರಗೋಡು: ಏರ್ ಕಾರ್ಗೋ ಮೂಲಕ ಕಾಸರಗೋಡಿಗೆ ಸಾಗಿಸಲೆಂದು ತಂದಿದ್ದ 9 ಕೋಟಿ ರೂ. ಮೌಲ್ಯದ 6.2 ಕಿಲೋ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಈ ಮಾಲನ್ನು ತಿರುವನಂತಪುರದಿಂದ ಕಾಸರಗೋಡಿಗೆ ಸಾಗಿಸಲೆಂದು ಬಂದಿದ್ದ ಕಾಸರಗೋಡು ಚಿನ್ನ ಕಳ್ಳಸಾಗಾಟ ಜಾಲಕ್ಕೆ ಸೇರಿದ ಕಣ್ಣೂರು ನಿವಾಸಿ ಅಮಲ್‌ರಾಜ್ ಎಂಬಾತನನ್ನು ಡಿಆರ್‌ಐ ಬಂಧಿಸಿದೆ.

ತಿರುವನಂತಪುರ ಶಂಕಮುಖ ದಲ್ಲಿರುವ ಕೇರಳ ಸ್ಟೇಟ್ ಇಂಡಸ್ಟ್ರಿ ಯಲ್ ಎಂಟರ್‌ಪ್ರೈಸಸ್ (ಕೆಎಸ್ ಐಇ)ಯ ನಿಯಂತ್ರಣದಲ್ಲಿರುವ ಏರ್ ಕಾರ್ಗೋ ಮೂಲಕ ಈ ಚಿನ್ನವನ್ನು ಕಾಸರಗೋಡಿಗೆ ಸಾಗಿಸುವ ಯೋಜನೆಯನ್ನು ಚಿನ್ನ ಕಳ್ಳಸಾಗಾಟ ದಂಧೆಯವರು ಹಾಕಿಕೊಂಡಿದ್ದರೆಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ದುಬೈಯಿಂದ ಎಮಿರೇಟ್ಸ್ ವಿಮಾನ ದಲ್ಲಿ ಯಾವುದೇ ಪ್ರಯಾಣಿಕರ ಹೆಸರನ್ನೂ ನಮೂದಿಸದೆ ಅನ್ ಒಕ್ಯುಪೈಡ್ ಡಿಪ್ಲೊಮ್ಯಾಟಿಕ್ ಬ್ಯಾಗ್‌ನಲ್ಲಿ ಬಚ್ಚಿಟ್ಟು ನಿನ್ನೆ ಮುಂಜಾನೆ ಈ ಚಿನ್ನವನ್ನು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದಿಳಿಸಲಾಗಿತ್ತು. ಬ್ಯಾಗಿನ ಒಳಗೆ ಹಾಗೂ ಡೋರ್ ಡೆಲಿವರಿ ರೂಪದಲ್ಲಿ ಒಟ್ಟು 6.2 ಕಿಲೋ ಚಿನ್ನವನ್ನು ಸಾಗಿಸಲು ಯತ್ನಿಸಲಾಗಿತ್ತು.

ಈ ಚಿನ್ನ ಒಳಗೊಂಡ ಬ್ಯಾಗನ್ನು ಏರ್ ಕಾರ್ಗೋದ ಏಜೆಂಟ್ ಸುರೇಂದ್ರನ್, ಕೆಎಸ್‌ಐಇ ಚಾಲಕ ಮತ್ತು ಪತ್ತನಂತಿಟ್ಟ ನಿವಾಸಿ ಹೆರೋಲ್ಡ್ ಫಿಲಿಫ್ ಎಂಬವರಿಂದ  ಪಡೆದು ಕಾಸರಗೋಡಿಗೆ ಸಾಗಿಸಲೆಂದು ಕಣ್ಣೂರು ನಿವಾಸಿ ಅಮಲ್‌ರಾಜ್ ವಿಮಾನ ನಿಲ್ದಾಣಕ್ಕೆ ನಂತರ ಬಂದಾಗ ಡಿಆರ್‌ಎ ತಂಡ ಅವನನ್ನು ಬಂಧಿಸಿದೆ.

ಕಾರ್ಗೋಗೆ ತಲುಪುವ ಬ್ಯಾಗಿನಿಂದ ಚಿನ್ನ ತೆಗೆದು ಅದನ್ನು ಚಿನ್ನ ಕಳ್ಳ ಸಾಗಾಟಗಾರರಿಗೆ ಹಸ್ತಾಂತರಿಸುವ ಏಜೆಂಟ್‌ಗಳಾಗಿದ್ದಾರೆ ಸುರೇಂದ್ರನ್ ಮತ್ತು ಪತ್ತನಂತಿಟ್ಟದ ಹಾರೋಲ್ಡ್ ಫಿಲಿಪ್ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಚಿನ್ನವನ್ನು ದುಬಾಯಿಯಿಂದ ಯಾರು ಕಳುಹಿಸಿಕೊಟ್ಟಿದ್ದರು ಮತ್ತು ಅದನ್ನು ಕಾಸರಗೋಡಿನ ಯಾರಿಗಾಗಿ ಸಾಗಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು ಎಂಬುದನ್ನು ಡಿಆರ್‌ಐ ಅಧಿಕಾರಿಗಳು ಇನ್ನೂ ಬಹಿರಂಗ ಪಡಿಸಿಲ್ಲ. ಇದರಿಂದಾಗಿ ಈ ಪ್ರಕರಣದ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆ ಇದೆ. ೨೦೨೦ ಜೂನ್ ೩೦ರಂದು ದುಬಾಯಿಯಿಂದ ಎಮಿರೇಟ್ಸ್ ವಿಮಾನದಲ್ಲಿ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಡಿಪ್ಲೊಮ್ಯಾಟಿಕ್ ಬ್ಯಾಗ್‌ನಲ್ಲಿ  30 ಕಿಲೋ ಚಿನ್ನ ತಂದು ಇದೇ ಕಾರ್ಗೋದ ಮೂಲಕ ಸಾಗಿಸುವ ಯತ್ನ ನಡೆಸಲಾಗಿತ್ತೆಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ.

You cannot copy contents of this page