ಕೊಚ್ಚಿ: ಅಕ್ರಮ ಹಣ ವರ್ಗಾವಣೆ, ಹವಾಲ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ಮುಖಂಡ ಪಿಣರಾಯಿ ವಿಜಯನ್, ಅವರ ಪುತ್ರಿ ಟಿ. ವೀಣ, ಮಾಜಿ ಸಚಿವ ಹಾಗೂ ಅಳಿಯನಾದ ಮುಹಮ್ಮದ್ ರಿಯಾಸ್ ಎಂಬಿವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾನೂನು ಪ್ರಕಾರ ಎಫ್ಐಆರ್ ನೋಂದಾಯಿಸಬಹುದೆಂಬ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಅಪೀಲು ನೀಡಲಿರುವ ಮನವಿಯನ್ನು ವಿಭಾಗೀಯ ಪೀಠ ತಳ್ಳಿದೆ. ಏಕಸದಸ್ಯ ಪೀಠದ ಆದೇಶದ ವಿರುದ್ಧ ಅಪೀಲು ನೀಡುವುದಕ್ಕೆ ಒಪ್ಪಿಗೆ ನೀಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ಡಿವಿಷನ್ ಬೆಂಚ್ ತಿರಸ್ಕರಿಸಿದೆ. ತಮ್ಮ ಭಾಗದ ಹೇಳಿಕೆಗಳನ್ನು ಕೇಳದೆ ನೀಡಿದ ಏಕಸದಸ್ಯ ಪೀಠದ ಆದೇಶ ಕಾನೂನು ಪರವಲ್ಲವೆಂದು ಅರ್ಜಿದಾರರು ವಾದಿಸಿದ್ದರು. ಸರಕಾರ ಕೂಡಾ ಅರ್ಜಿದಾರರಿಗೆ ಅನುಕೂಲವಾದ ನಿಲುವು ಸ್ವೀಕರಿಸಿತ್ತು. ಆದರೆ ಅಪೀಲಿಗೆ ಅನುಮತಿ ನೀಡಬಾರದೆಂದು ಇ.ಡಿ ನಿಲುವು ಹೊಂದಿತ್ತು. ಇದನ್ನು ಪರಿಗಣಿಸಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.






