ನವದೆಹಲಿ: ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವ ಭಾರತವನ್ನು ಅದರಿಂದ ಹಿಂದಕ್ಕೆ ಸರಿಯುವಂತೆ ಮಾಡಲು ಅಮೆರಿಕ ಅಮದು ಮಾಡಿಕೊಳ್ಳುತ್ತಿರುವ ಭಾರತದ ಉತ್ಪನ್ನಗಳ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸುವ ಬೆದರಿಕೆಗೆ ಭಾರತ ಜಗ್ಗದೇ ಇರುವುದನ್ನು ಗಮನಿಸಿದ ಅಮೆರಿಕ ಕೊನೆಗೂ ಅಂತಹ ಸುಂಕ ಹೇರಿಕೆ ಹೊಂದಿ ಕ್ರಮವನ್ನು ಹಿಂಪಡೆದುಕೊಂಡಿದೆ. ಆ ಮೂಲಕ ಭಾರತದ ನಿಲುವಿಗೆ ಕೊನೆಗೂ ಗೆಲುವು ಉಂಟಾಗಿದೆ.
ರಷ್ಯಾದಿಂದ ಭಾರತ ಮಾತ್ರವಲ್ಲ ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳು ತೈಲ ಖರೀದಿ ಮಾಡುತ್ತಿವೆ. ಅದನ್ನು ತಡೆಗಟ್ಟಲು ರಷ್ಯಾದ ಇಂಧನ ರಫ್ತನ್ನು ಟಾರ್ಗೆಟ್ ಮಾಡಿ ಆ ದೇಶದಿಂದ ತೈಲ ಖರೀದಿಸುವ ದೇಶಗಳಿಗೆ ಶೇ. ೧೦೦ರಷ್ಟು ಸುಂಕ ವಿಧಿಸಿರುವ ಲಿಂಡ್ಸ್ ಒ. ಗ್ರಹಾಂ ಸ್ಯಾಕ್ಷನಿಂಗ್ ರಷ್ಯಾ ಆಂಡ್ ಇರಾನ್ ಆಕ್ಟ್ -೨೦೨೬ ಮಸೂದೆಗೆ ಅಮೆರಿಕ ಅಂಗೀಕಾರ ನೀಡಿತ್ತು. ಅದರ ಜ್ಯಾರಿಗೆ ಒಂದೇ ದಿನ ಬಾಕಿ ಇರುವಾಗಲೇ ಕೊನೆ ಕ್ಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ರಾತ್ರಿ ಮಹತ್ವದ ಘೋಷಣೆ ಮಾಡಿದ್ದು, ರಷ್ಯನ್ ಸ್ಯಾಂಕ್ಷನ್ ಮಸೂದೆಯಲ್ಲಿರುವ ನಿರ್ಬಂಧಗಳು ಹಾಗೂ ಸುಂಕಗಳ ಜ್ಯಾರಿಯನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ನೆಪವನ್ನು ನೀಡಿ ಈ ಸುಂಕ ಹಾಗೂ ನಿರ್ಬಂಧಗಳಿಗೆ ವಿನಾಯಿತಿ ನೀಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಈ ಆದೇಶ ಹೊರಡಿಸಿದ್ದಾರೆ. ಇದರಿಂದ ಭಾರತ ಮಾತ್ರವಲ್ಲ ರಷ್ಯಾದಿಂದ ತೈಲ ಖರೀದಿಸುವ ಇತರ ದೇಶಗಳಿಗೂ ಅಮೆರಿಕಾದ ಸುಂಕ ಬೆದರಿಕೆಯಿಂದ ದೊಡ್ಡ ರಿಲೀಫ್ ಸಿಕ್ಕಿದೆ.







