ಉಪ್ಪಳ: ಡಾ. ವೆಂಕಟರಾಜ ಪುಣಿಂಚಿತ್ತಾಯರ ಸ್ಮರಣಾರ್ಥ ಕಾರ್ಯ ಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯವಾಗಿದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಮಂಜೇಶ್ವರ ಗಿಳಿವಿಂಡುನಲ್ಲಿ ಜರಗಲಿರುವ ಪುವೆಂಪು ನೆನಪು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು. ಭಾಷೆ ಮತ್ತು ಸಂಸ್ಕೃತಿಯ ಉನ್ನತಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಅವರು ನುಡಿದರು.
ಈ ವೇಳೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಜಯಾನಂದ ಹೊಸದುರ್ಗ, ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ, ಹರೀಶ್ ಗೋಸಾಡ, ಥೋಮಸ್ ಡಿಸೋಜ ಉಪಸ್ಥಿತರಿದ್ದರು.






