ಕಾಸರಗೋಡು: ಆಸ್ಪತ್ರೆಯ ಶುಚೀಕರಣ ಸಿಬ್ಬಂದಿಗಳು, ಕುಟುಂಬಶ್ರೀ ಕಾರ್ಯಕರ್ತೆಯರು ಹಾಗೂ ಸಹ ಸಿಬ್ಬಂದಿಗಳಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ| ಜನಾರ್ದನ್ ನಾಯ್ಕ್ ಸಿ.ಎಚ್. ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿದರು. ಜನರಲ್ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ರ ಸಾನಿಧ್ಯದಲ್ಲಿ ಈ ಬಟ್ಟೆಬರೆಗಳನ್ನು ವಿತರಿಸಲಾಯಿತು. ಇದು ಮಾತ್ರವಲ್ಲ ನೇತ್ರ ಶಸ್ತ್ರಕ್ರಿಗೊಳಗಾಗಿ ಚಿಕಿತ್ಸೆಯಲ್ಲಿರುವ ಬಡ ಕುಟುಂಬದ ರೋಗಿಗಳಿಗೆ ಡಾ| ಜನಾರ್ದನ್ ನಾಯ್ಕ್ ಇದೇ ಸಂದರ್ಭದಲ್ಲಿ ಒಂದು ವರ್ಷದ ತನಕವಿರುವ ಔಷಧ ಸಾಮಗ್ರಿಗಳನ್ನು ಉಚಿತವಾಗಿ ನೀಡಿದರಲ್ಲದೆ, ಓರ್ವೆ ರೋಗಿಗೆ ಆಂಬುಲೆನ್ಸ್ ಸೌಕರ್ಯವನ್ನೂ ಒದಗಿಸಿದರು. ಮಾತ್ರವಲ್ಲದೆ, ತಮ್ಮ ಹುಟ್ಟುಹಬ್ಬವನ್ನು ಪ್ರತೀ ವರ್ಷ ಇದೇ ರೀತಿ ಇತರರಿಗೆ ಸಹಾಯವೊದಗಿಸುವ ಮೂಲಕ ಆಚರಿಸುತ್ತಾ ಬಂದಿದ್ದಾರೆ.
ಕೋವಿಡ್ ಹೀರೋ ಎಂದೇ ಖ್ಯಾತಿ ಪಡೆದಿರುವ ಇವರು ಓರ್ವ ಉತ್ತಮ ವೈದ್ಯ, ಉತ್ತಮ ಕಲಾವಿದ ಹಾಗೂ ಲೇಖಕರೂ ಆಗಿದ್ದಾರೆ. ಡಾ| ಸುನಿಲ್ ಚಂದ್ರನ್, ಡಾ| ಸಾಹಿದ್, ಡಾ| ಸರಿಗ, ಡಾ| ಶಮೀನಾ, ಡಾ| ರಮ್ಯಾ, ಡಾ| ಅರುಣ್ ರಾಮ್, ಡಾ ನಿಖಿಲ್, ಡಾ| ಸುರೇಶ್, ಮಾಹಿನ್ ಕುನ್ನಿಲ್, ಅರಾಫತ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.







