ರಾಜ್ಯ ಮಟ್ಟದ ವಿಜ್ಞಾನೋತ್ಸವಕ್ಕೆ ಕನ್ನಡ ಭಾಷೆ ಬಲ್ಲ ತೀರ್ಪುಗಾರರು, ಅನುವಾದಕರನ್ನು ನೇಮಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ

ಕಾಸರಗೋಡು: ರಾಜ್ಯಮಟ್ಟದ ವಿಜ್ಞಾನೋತ್ಸವ ೨೦೨೬ಕ್ಕೆ ಕನ್ನಡ ಭಾಷೆ ಬಲ್ಲ ತೀರ್ಪುಗಾರರು ಹಾಗೂ ಅನುವಾದಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಬಾಡೂರು ಕಳಂಜಡ್ಕದ ಚನಿಯಪ್ಪ ಕೆ.ಎಸ್. ಎಂಬವರು ರಾಜ್ಯ ಶಿಕ್ಷಣ ಸಚಿವ, ಮಂಜೇಶ್ವರ ಶಾಸಕ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಮೊದಲಾದವರಿಗೆ ಮನವಿ ಸಲ್ಲಿಸಿದ್ದಾರೆ. ವಿಜ್ಞಾನೋತ್ಸವ ಸ್ಪರ್ಧೆಗಳಿಗೆ ಕನ್ನಡ ಬಲ್ಲ ತೀರ್ಪುಗಾರರನ್ನು ಹಾಗೂ ಅನುವಾದಕರನ್ನು ನೇಮಿಸದಿರುವುದರಿಂದ ಕನ್ನಡ ಮಾತ್ರವೇ ತಿಳಿದ ವಿದ್ಯಾರ್ಥಿಗಳು ಸಮಸ್ಯೆಗೊಳಗಾಗುತ್ತಿದ್ದಾರೆ. ಇವರು ತಿಳಿಸುವುದನ್ನು ಕನ್ನಡ ತಿಳಿಯದ ತೀರ್ಪುಗಾರರಿಗೆ ಅರ್ಥೈಸಲಾಗದುದರಿಂದ ಉತ್ತಮ ಸಾಧನೆಗೈಯ್ಯುವ ವಿದ್ಯಾರ್ಥಿಗಳಿಗೆ ಅಂಕ ದೊರಕದೆ ಅವರು ಬಹುಮಾನ ವಂಚಿತರಾಗುವ ಸ್ಥಿತಿ ಎದುರಾಗುತ್ತಿದೆ.

ಅರ್ಜಿದಾರನ ಪುತ್ರ ಶೇಣಿ ಶಾಲೆಯ 1೦ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದು, ನಾಯಮ್ಮಾರ್‌ಮೂಲೆ ಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಭಾಗವಹಿಸಿದ್ದನು. ಹೈಸ್ಕೂಲ್ ವಿಭಾಗದ ವಿಜ್ಞಾನ ಕಾರ್ಯಮಾದರಿ ಸ್ಪರ್ಧೆಯಲ್ಲಿ ಈತನ ವಿವರಣೆಯನ್ನು ತಿಳಿದುಕೊಳ್ಳಲು ಅಲ್ಲಿ ಕನ್ನಡ ಬಲ್ಲ  ತೀರ್ಪುಗಾರರೋ ಅನುವಾದಕರೋ ಇರಲಿಲ್ಲ. ಕೊನೆಗೆ ಅಲ್ಪಸ್ವಲ್ಪ ಕನ್ನಡ ಬಲ್ಲವರನ್ನು ಕರೆಸಿ ಅವರ ಮೂಲಕ ಅನುವಾದಿಸಿಕೊಳ್ಳಲಾಯಿತು.  ಈ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಈ ವಿದ್ಯಾರ್ಥಿಯ ರೀತಿಯಲ್ಲೇ ಇನ್ನೂ ಹಲವರು ಕನ್ನಡ ವಿದ್ಯಾರ್ಥಿಗಳಿಗೆ ಮಲೆಯಾಳದಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಅರ್ಥ ಮಾಡಿ ಕೊಳ್ಳಬಲ್ಲ ತೀರ್ಪುಗಾರರು, ಅನುವಾದಕರೂ ಕೂಡಾ ಇಲ್ಲದಿರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.

ಸ್ಪರ್ಧೆಗಳಲ್ಲಿ ಕನ್ನಡ ಮಾತ್ರ ತಿಳಿದಿರುವ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಮಾದರಿಯನ್ನು ವಿವರಿಸುವಾಗ ಭಾಷೆಯ ತೊಂದರೆ ಎದುರಿಸಬಹುದು. ಆದ್ದರಿಂದ ರಾಜ್ಯ ಮಟ್ಟದ ವಿಜ್ಞಾನೋತ್ಸವ ಸ್ಪರ್ಧೆಗೆ ಕನ್ನಡ ತಿಳಿದಿರುವ ತೀರ್ಪುಗಾರರು ಹಾಗೂ ಅನುವಾದಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಚನಿಯಪ್ಪ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಭಾಷೆ ಎಂದಿಗೂ ವಿದ್ಯಾರ್ಥಿಯ ಪ್ರತಿಭೆ, ಸೃಜನಶೀಲತೆ ಹಾಗೂ ವೈಜ್ಞಾನಿಕ ಸಾಧನೆಗೆ ಅಡ್ಡಿಯಾಗಬಾರದು. ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುವುದು ಸರಕಾರ ಮತ್ತು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿದ್ದಾರೆ.

RELATED NEWS

You cannot copy contents of this page