ಪೆರ್ಲ: ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯ (ಡಿಸಿಆರ್) ಹಾಗೂ ಬೆಳ್ಳೂರು ಮತ್ತು ಎಣ್ಮಕಜೆ ಕೃಷಿ ಭವನಗಳ ಸಹಯೋಗದಲ್ಲಿ ಎರಡೂ ಪಂಚಾಯತ್ ಗಳ ಆಯ್ದ ಪರಿಶಿಷ್ಟ ಪಂಗಡದ (ಎಸ್ಟಿ) ಗೇರು ಬೆಳೆಗಾರರಿಗಾಗಿ ಒಂದು ದಿನದ ವಿಶೇಷ ತರಬೇತಿ ಹಾಗೂ ಉಚಿತ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಸ್ವರ್ಗ ಸಮೀಪದ ದೇಲಂತಾರು ಸಮುದಾಯ ಭವನದಲ್ಲಿ ನಡೆಯಿತು.
ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿಯಲ್ಲಿ ನಿರ್ದೇಶನಾಲಯದ ಜ್ಞಾನ ವಿಸ್ತರಣಾ ಚಟುವಟಿಕೆಗಳ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಎಣ್ಮಕಜೆ ಪಂ. ಅಧ್ಯಕ್ಷೆ ಕುಸುಮಾವತಿ ಬಿ. ಉದ್ಘಾಟಿಸಿ ಮಾತನಾಡಿ, ‘ರೈತರು ಬೆಳೆ ರೋಗಗಳು ಹಾಗೂ ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಶೋಧನಾ ಸಂಸ್ಥೆಯ ಕನ್ನಡಿಗ ಅಧಿಕಾರಿಗಳು ನಮ್ಮದೇ ಭಾಷೆಯಾದ ಕನ್ನಡದಲ್ಲಿ ತರಬೇತಿ ನೀಡುತ್ತಿರುವುದು ರೈತರಿಗೆ ತುಂಬಾ ವಿಶೇಷ ಹಾಗೂ ಸಹಕಾರಿಯಾಗಿದೆ’ ಎಂದರು.
ಬೆಳ್ಳೂರು ಪಂ. ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ. ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಪಂ. ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳ್ಳೂರು ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೆ. ಸಹಿತ ಹಲವರು ಭಾಗವಹಿಸಿದರು.
ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯ ವಿಜ್ಞಾನಿಗಳಾದ ಡಾ.ಅಶ್ವತಿ ಚಂದ್ರಕುಮಾರ್, ಡಾ. ಎರದಾಸಪ್ಪ ಹಾಗೂ ಡಾ. ಸಿದ್ದಣ್ಣ ಸವದಿ ಅವರು ಗೇರು ಕೃಷಿಯ ಆಧುನಿಕ ತಂತ್ರಜ್ಞಾನ, ರೋಗ ನಿರ್ವಹಣೆ, ಮತ್ತು ಇಳುವರಿ ಹೆಚ್ಚಿಸುವ ಕುರಿತು ವಿಷಯ ಮಂಡನೆ ಮಾಡಿದರು. ಎಣ್ಮಕಜೆ ಪಂ ಸದಸ್ಯರಾದ ರಾಮಚಂದ್ರ ಎಂ. ನಳಿನಾಕ್ಷಿ ಸಶುಭ ಹಾರೈಸಿದರು. ಬೆಳ್ಳೂರು ಕೃಷಿ ಅಧಿಕಾರಿ ಅದ್ವೈತ್ ಎಂ.ವಿ. ಸ್ವಾಗತಿಸಿದರು. ಎಣ್ಮಕಜೆ ಕೃಷಿ ಅಧಿಕಾರಿ ನಿತಿನ್ ಬಿ.ಕೆ. ವಂದಿಸಿದರು. ಶಿಬಿರದಲ್ಲಿ ಎರಡೂ ಪಂಚಾಯತ್ಗಳ ೫೦ಕ್ಕೂ ಹೆಚ್ಚು ಕೃಷಿಕರು ಪಾಲ್ಗೊಂಡಿದ್ದರು. ರೈತರಿಗೆ ಅನುಕೂಲವಾಗುವಂತೆ ವಾಹನ ಸೌಲಭ್ಯವನ್ನು ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಶಿಷ್ಟ ಪಂಗಡದ ರೈತರಿಗೆ ಅಗತ್ಯವಿರುವ ಕೃಷಿ ಉಪಕರಣಗಳು ಮತ್ತು ರಸಗೊಬ್ಬರಗಳನ್ನು ಉಚಿತವಾಗಿ ವಿತರಿಸಲಾಯಿತು. ಕೃಷಿ ಸಹಾಯಕರು ಕಾರ್ಯಕ್ರಮದ ಯಶಸ್ಸಿ ಸಹಕರಿಸಿದರು





