ಕಾಸರಗೋಡು: ಎಂಡೋಸಲ್ಫಾನ್ ಸೆಲ್‌ಗೆ ಮುಂದಿನ ಒಂದು ವಾರದೊಳಗಾಗಿ ರೂಪು ನೀಡಲಾಗುವುದೆಂದು ಮುಖ್ಯಮಂತ್ರಿ ವಿ.ಡಿ, ಸತೀಶನ್ ಭರವಸೆ ನೀಡಿದ್ದಾರೆ.
ನಗರದ ಸರಕಾರಿ ಅತಿಥಿಗೃಹದಲ್ಲಿ ನಿನ್ನೆ ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಅವರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಸೆಲ್‌ನ ಅಂಗವಾಗಿ ತಜ್ಞರ ಸಮಿತಿಗೂ ರೂಪು ನೀಡಲಾಗು ವುದು. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಉಚಿತ ಚಿಕಿತ್ಸೆ ಮತ್ತು ಪುನರ್ವಸತಿ ಇತ್ಯಾದಿ ಯೋಜನೆಗಳನ್ನು ಏಕೀಕರಿಸು ವುದೇ ಈ ಸಮಿತಿಗೆ ರೂಪು ನೀಡುವುದರ ಉದ್ದೇಶವಾಗಿದೆ. ಮಾತ್ರವಲ್ಲ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಇನ್ನಷ್ಟು ಸಂತ್ರಸ್ತರನ್ನು ಸೇರ್ಪಡೆಗೊಳಿಸಲಾಗುವುದೆಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಾರಡ್ಕ, ಬೆಳ್ಳೂರು, ಬದಿಯಡ್ಕ, ಮುಳಿಯಾರು, ಎಣ್ಮಕಜೆ, ಕಳ್ಳಾರ್, ಕುಂಬ್ಡಾಜೆ, ಕಯ್ಯೂರು- ಚೀಮೇನಿ, ಪುಲ್ಲೂರ್- ಪೆರಿಯ ಮತ್ತು ಪನತ್ತಡಿ ಪಂಚಾಯತ್‌ಗಳನ್ನು ಎಂಡೋಸಲ್ಫಾನ್ ಸಂತ್ರಸ್ತ ವಲಯವನ್ನಾಗಿ ಈ ಹಿಂದೆಯೇ ಘೋಷಿಸಲಾಗಿದೆ. ಇಂತಹ ಪಂಚಾ ಯತ್‌ಗಳ ಸಮೀಪದ ಪಂಚಾಯತ್‌ಗಳ ಸಂತ್ರಸ್ತರನ್ನೂ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಒಳಪಡಿಸಲಾಗುವುದು.
೨೦೨೪ರಲ್ಲಿ ನಡೆಸಲಾದ ವೈದ್ಯಕೀಯ ಶಿಬಿರದಲ್ಲಿ ಸಂತ್ರಸ್ತರೆಂದು ಗುರುತಿಸಲು ಏರ್ಪಡಿಸಲಾದ ಮಾನದಂಡಗಳನ್ನು ಮರು ಪರಿಶೀಲಿಸಲಾಗುವುದು. 2011ರ ನಂತರ ಜನಿಸಿದ ಸತ್ರಸ್ತರನ್ನು ಪಟ್ಟಿಯಲ್ಲಿ ಒಳಪಡಿಸದೇ ಇದ್ದಲ್ಲಿ ಅವರನ್ನೂ ಆ ಯಾದಿಯಲ್ಲಿ ಒಳಪಡಿಸುವ ವಿಷಯವನ್ನು ಪರಿಶೀಲಿಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರು ಚಿಕಿತ್ಸೆಗಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಲಾಗುವುದು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಇನ್ನು ಕಾಸರಗೋಡು ಜನರಲ್ ಆಸ್ಪತ್ರೆ, ಜಿಲ್ಲಾ ಸರಕಾರಿ ಆಸ್ಪತ್ರೆ, ಉಕ್ಕಿನಡ್ಕದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೂ ಉನ್ನತ ಮಟ್ಟದ ಚಿಕಿತ್ಸೆ ನೀಡುವ ಸೌಕರ್ಯ ಏರ್ಪಡಿಸಲಾಗುವುದು. ಅಗತ್ಯದ ಔಷಧಿ ಹಾಗೂ ಚಿಕಿತ್ಸಾ ಉಪಕರಣಗಳನ್ನು ಪೂರೈಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರಿಗೆ ನೀಡಲಾಗುವ ಪಿಂಚಣಿ ಮೊತ್ತವನ್ನು 17೦೦ ರೂ.ನಿಂದ 22೦೦ ರೂ.ಗೇರಿಸಲಾಗುವುದು. ಅವರ ಪರಿಚಾಲಕರಿಗೂ ಅಗತ್ಯದ ನೆರವು ನೀಡಲಾಗುವುದು. ಈ ರೋಗ ಮೂರನೇ ತಲೆಮಾರಿಗೆ ವ್ಯಾಪಿಸತೊಡಗಿದ್ದು, ಅದನ್ನು ತಡೆಗಟ್ಟಲು ವೈಜ್ಞಾನಿಕ ರೀತಿಯ ಪುನರ್ವಸತಿಗೆ ಆದ್ಯತೆ ನೀಡಲಾಗುವು ದೆಂದೂ ಮುಖ್ಯಮಂತ್ರಿ ಹೇಳಿದ್ದಾರೆ.
ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಕಲ್ಲಟ್ರಾ ಮಾಹಿನ್, ಎ.ಕೆ.ಎಂ. ಅಶ್ರಫ್, ಕೆ. ನೀಲಕಂಠನ್, ಸಂದೀಪ್ ವಾರಿಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ. ನಿಧಿನ್‌ರಾಜ್ ಮತ್ತು ಜಿಲ್ಲಾ ವೈದ್ಯಾಧಿಕಾರಿ ಕೆ.ಟಿ. ರೇಖ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.






