ಮನೆಯಿಂದ ನಗ-ನಗದು ಕಳವಿಗೀಡಾದ ಪ್ರಕರಣ: ವಿಚಾರಣೆಗೆ ಬರುವಂತೆ ಪೊಲೀಸರು  ತಿಳಿಸಿದ್ದ ನೆರೆಮನೆ ನಿವಾಸಿ  ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಮನೆಯಿಂದ ನಗನಗದು ಕಳವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ  ತನಿಖೆಯಂಗವಾಗಿ    ವಿಚಾರಣೆಗೆ ಬರುವಂತೆ ಪೊಲೀಸರು ನಿರ್ದೇಶ  ನೀಡಿದ್ದ  ನೆರೆಮನೆ ನಿವಾಸಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೂಲತಃ ಮೈಸೂರು ವಿರಾಜಪೇಟೆ ನಿವಾಸಿಯೂ ಈಗ ಪನಯಾಲ್ ಪೆರಿಯಾಟಡ್ಕ ನೀರಾಟ್ಟಿ ತೊಟ್ಟಿಯಿಲ್  ಎಂಬಲ್ಲಿ ವಾಸಿಸುವ ಬಾಲಕೃಷ್ಣನ್ (58) ಸಾವನ್ನಪ್ಪಿದ ವ್ಯಕ್ತಿ.  ಪನಯಾಲ್ ಪೆರಿಯಾಟಡ್ಕ ನೀರಾಟ್ಟಿ ನಿವಾಸಿ ಧನ್ಯ ಎಂಬವರ  ಮನೆಯಿಂದ ನಿನ್ನೆ ಚಿನ್ನಾಭರಣ ಹಾಗೂ ಹಣ ಕಳವಿಗೀ ಡಾಗಿತ್ತು. ನಿನ್ನೆ  ಮುಂಜಾನೆ ವಾಯುವಿ ಹಾರಕ್ಕಾಗಿ ಧನ್ಯ   ಹೊರಗೆ ಹೋಗಿ ಮರಳಿ ಬರುವಷ್ಟರಲ್ಲಿ ಮನೆಯಿಂದ  ೫ ಪವನ್ ಚಿನ್ನಾಭರಣ ಹಾಗೂ ಮೂರು ಸಾವಿರ ರೂಪಾಯಿ ಕಳವುಗೈಯ್ಯಲ್ಪಟ್ಟಿತ್ತು.  ಈ ವೇಳೆ ಧನ್ಯರ ಮಗಳು ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ನಿದ್ರಿಸುತ್ತಿದ್ದಳು. ಇದರಿಂದ ಧನ್ಯ  ಮನೆಗೆ ಬೀಗ ಜಡಿದು ಕೀಲಿಕೈಯನ್ನು  ವಿದ್ಯುತ್ ಮೀಟರ್ ಬಾಕ್ಸ್‌ನ  ಮೇಲಿರಿಸಿ ವಾಯು ವಿಹಾರಕ್ಕೆ ತೆರಳಿದ್ದರು. ಆ ಸಂದರ್ಭ ನೋಡಿ ಕಳ್ಳರು ಮೀಟರ್ ಬೋಕ್ಸ್‌ನ ಮೇಲಿರಿಸಿದ  ಕೀಲಿಕೈಯನ್ನು  ತೆಗೆದು ಮನೆಯಿಂದ ನಗ-ನಗದು ಕಳವುಗೈದು ಬಳಿಕ ಕೀಲಿಕೈಯನ್ನು ಅದೇ ಸ್ಥಳದಲ್ಲಿರಿಸಿ ಕಾಲ್ಕಿತ್ತಿದ್ದರು.  ಮನೆಯಲ್ಲಿ ಕಳವು ನಡೆದ ಬಗ್ಗೆ   ಧನ್ಯ ಬೇಕಲ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ  ಪೊಲೀಸರು ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಮನೆಗೆ ಬಂದು ತನಿಖೆ ಆರಂಭಿಸಿದಾಗ ಶ್ವಾನ ಮನೆಯ ೨೦೦ ಮೀಟರ್ ದೂರದಲ್ಲಿರುವ  ಬಾಲಕೃಷ್ಣನ್‌ರ ಮನೆಯತ್ತ ಸಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕೃಷ್ಣನ್‌ರನ್ನು  ವಿಚಾರಿಸಿ ಹೇಳಿಕೆ ದಾಖಲಿಸಲು ಠಾಣೆಗೆ ಬರುವಂತೆ ಪೊಲೀಸರು    ನಿರ್ದೇಶ ನೀಡಿದ್ದರು. ಅದರ ಬೆನ್ನಲ್ಲೇ  ಬಾಲಕೃಷ್ಣನ್  ಮನೆಪಕ್ಕದ ಹಿತ್ತಿಲ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಪುತ್ರ  ನೀಡಿದ ಮಾಹಿತಿಯಂತೆ   ತಕ್ಷಣ ಪೊಲೀಸರು ಆಗಮಿಸಿ ಬಾಲಕೃಷ್ಣನ್‌ರನ್ನು ಉದುಮದ ಆಸ್ಪತ್ರೆಗೆ ಸಾಗಿಸಿ ನಂತರ ಕಾಸರಗೋಡು ನಗರದ ಆಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಿದರೂ  ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ರಾಮನ್ ನಾಯರ್-ಕಲ್ಯಾಣಿ ದಂಪತಿ ಪುತ್ರನಾಗಿರುವ  ಬಾಲಕೃಷ್ಣನ್ ಪತ್ನಿ ರಾಧಾ, ಪುತ್ರ ಅನ್‌ಶಿಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page