ಕಾಸರಗೋಡು: ಕೇರಳದ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿರುವ ಕನ್ನಡಿಗರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ ಹಾಗೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂವರ್ಧನೆಗಾಗಿ ಸರಕಾರ ವಿಶೇಷ ಗಮನ ಹರಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ನಿಯೋಗ ಮುಖ್ಯಮಂತ್ರಿ ವಿ.ಡಿ. ಸತೀಶನ್ರಿಗೆ ಮನವಿ ಸಲ್ಲಿಸಿತು. ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆಗಾಗಿ ಈ ಹಿಂದೆ ಕೇರಳ ಸರಕಾರ ಹೊರಡಿಸಿರುವ ವಿವಿಧ ಸರಕಾರಿ ಆದೇಶಗಳು ಹಾಗೂ ಅವುಗಳ ಅನುಷ್ಠಾನದ ಕುರಿತು ಚರ್ಚಿಸಿತು.
ಭಾಷಾ ಅಲ್ಪಸಂಖ್ಯಾತರ ಶೈಕ್ಷಣಿಕ, ಭಾಷಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಹಕ್ಕುಗಳ ರಕ್ಷಣೆಗೆ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಬೇಕು ಅಥವಾ ಸ್ವತಂತ್ರ ಭಾಷಾ ಅಲ್ಪಸಂಖ್ಯಾತರ ಆಯೋಗ ರಚಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ನಿಯೋಗ ಮುಖ್ಯಮಂತ್ರಿಯ ಮುಂದಿಟ್ಟ ಪ್ರಮುಖ ಬೇಡಿಕೆಗಳು:
ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ಇಲಾಖೆ ಅಥವಾ ಸ್ವತಂತ್ರ ಆಯೋಗ ರಚಿಸುವುದು.
ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಾಗಿ ಈ ಹಿಂದೆ ಹೊರಡಿಸಿರುವ ಸರಕಾರಿ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು.
ಕನ್ನಡಿಗರಿಗೆ ಮೀಸಲಾದ ಸರಕಾರಿ ಹುದ್ದೆಗಳನ್ನು ಅರ್ಹ ಕನ್ನಡ ಅಭ್ಯರ್ಥಿಗಳಿಂದಲೇ ಭರ್ತಿ ಮಾಡುವುದು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅರ್ಹ ಅಧ್ಯಾಪಕರಿಗೆ ಮುಖ್ಯೋಪಾಧ್ಯಾಯರು ಸೇರಿದಂತೆ ಸೂಕ್ತ ಹುದ್ದೆಗಳಲ್ಲಿ ಆದ್ಯತೆ ನೀಡುವುದು.
ಸರಕಾರಿ ಆಡಳಿತಾತ್ಮಕ ವ್ಯವಹಾರಗಳಲ್ಲಿ ಮಲಯಾಳಂ ಭಾಷೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಕನ್ನಡ ಭಾಷೆಗೂ ನೀಡುವುದು.
ಕನ್ನಡ ಮಾಧ್ಯಮ ಶಾಲೆಗಳಿಗೆ ಅಗತ್ಯವಿರುವ ಅಧ್ಯಾಪಕ ಕೈಪಿಡಿ, ಪಠ್ಯಸಾಮಗ್ರಿ ಹಾಗೂ ಇತರ ಶೈಕ್ಷಣಿಕ ಸಂಪನ್ಮೂಲಗಳನ್ನು ಕನ್ನಡದಲ್ಲಿ ಒದಗಿಸುವುದು.
ಶಾಲಾ ಕಲೋತ್ಸವ ಮತ್ತು ಇತರ ಶೈಕ್ಷಣಿಕ ಮೇಳಗಳಲ್ಲಿ ಕನ್ನಡ ಭಾಷೆಯ ಸ್ಪರ್ಧೆಗಳನ್ನು ರಾಜ್ಯಮಟ್ಟದವರೆಗೂ ಆಯೋಜಿಸಲು ಅವಕಾಶ ಕಲ್ಪಿಸುವುದು.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡುವುದು.
ಕೇರಳದ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಗಣಿಸÀÄವುದು.
ನಿಯೋಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಕೇಂದ್ರ ಸಮಿತಿ ಕೋಶಾಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು.





