ಚಿಪ್ಪಾರು ಶಾಲೆ ಬಳಿ ವಿದ್ಯುತ್ ತಂತಿಗೆ ಬಾಗಿದ ಮರ: ಅಪಾಯಕ್ಕೆ ಆಹ್ವಾನ
ಉಪ್ಪಳ: ಹೈ ಟೆನ್ಶನ್ ವಿದ್ಯುತ್ ತಂತಿ ಮೇಲೆ ಮಾವಿನ ಮರವೊಂದು ಬಾಗಿ ನಿಂತಿದ್ದು, ಅಪಾಯ ಆಹ್ವಾನಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸಲು ಮುಂದಾಗದಿರುವುದು ಸ್ಥಳೀಯರಲ್ಲಿ ರೋಷಕ್ಕೆ ಕಾರಣವಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಬಾಗ್- ಕುರುಡಪದವು ರಸ್ತೆಯ ಚಿಪ್ಪಾರು ಶಾಲೆಯ ಬಳಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡಿ ಮರವು ತಂತಿಗೆ ಬಾಗಿಕೊಂಡಿದೆ. ಹಲವು ತಿಂಗಳ ಹಿಂದೆಯೇ ಈ ಬಗ್ಗೆ ವಿದ್ಯುತ್ ಇಲಾಖೆಗೆ ಸ್ಥಳೀಯರು ತಿಳಿಸಿದ್ದರೂ ಅಧಿಕೃತರು ಬಂದ ನೋಡಿ ಹೋದದ್ದಲ್ಲದೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪರಿಸರದಲ್ಲಿ ಬಸ್ ನಿಲುಗಡೆಯಿದ್ದು, ಶಾಲಾ ಮಕ್ಕಳ ಸಹಿತ ಹಲವಾರು ಮಂದಿ ದಿನನಿತ್ಯ ನಡೆದು ಹೋಗುತ್ತಿದ್ದಾರೆ. ಕುರುಡಪದವು, ಲಾಲ್‌ಬಾಗ್, ಬೇಡಗುಡ್ಡೆ ಮೊದಲಾದ ಭಾಗಗಳಿಗೆ ಈ ಮೂಲಕ ಬಸ್ ಸಹಿತ ಹಲವು ವಾಹನಗಳು ಸಂಚರಿಸುತ್ತಿವೆ. ಮರದ ರೆಂಬೆ ಮುರಿದು ಬಿದ್ದು, ತಂತಿಯ ಜೊತೆ ವಿದ್ಯುತ್ ಕಂಬಗಳಿಗೂ ಹಾನಿಯಾಗುವ ಸಂಭವವಿದೆ. ಹಾಗಾದರೆ ಉಂಟಾಗಬಹುದಾದ ಅನಾಹುತದ ಬಗ್ಗೆ ಸ್ಥಳೀಯರು ಚಿಂತಿತರಾಗಿದ್ದಾರೆ.
ಮಳೆ, ಗಾಳಿಗೆ ಯಾವುದೇ ಕ್ಷಣದಲ್ಲಿ ಬೀಳಬಹುದಾದ ಸ್ಥಿತಿಯಲ್ಲಿರುವ ಈ ಮರದ ರೆಂಬೆಗಳನ್ನು ಕೂಡಲೇ ತೆರವುಗೊಳಿಸಿ ಸಂಭವನೀಯ ದುರಂತವನ್ನು ತಪ್ಪಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.