ಉಪ್ಪಳ: ಕೊಳವೆ ಬಾವಿ ಯೊಂದು ಉಪಯೋಗ ಶೂನ್ಯ ಗೊಂಡು ತುಕ್ಕುಹಿಡಿದು ಅಪಾಯ ಆಹ್ವಾನಿಸುತ್ತಿದೆ. ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ-ಪುಳಿಕುತ್ತಿ ರಸ್ತೆಯಲ್ಲಿ ಸುಮಾರು 15 ವರ್ಷಗಳಿಂದ ಉಪಯೋಗ ಶೂನ್ಯಗೊಂಡಿರುವ ಕೊಳವೆಬಾವಿ ಈಗ ಅಪಾಯಕ್ಕೆ ಕಾರಣವಾಗಿದೆ. ಇದರ ಹ್ಯಾಂಡಲ್ ಸಹಿತದ ಭಾಗಗಳು ಜೀರ್ಣಗೊಂಡು ಮುರಿದುಬಿದ್ದಿದ್ದು, ಹೊಂಡ ಬಾಯ್ದೆರದ ಸ್ಥಿತಿಯಲ್ಲಿದೆ. ರಸ್ತೆ ಬದಿಯಲ್ಲೇ ಇರುವ ಈ ಕೊಳವೆ ಬಾವಿಯ ಹ್ಯಾಂಡಲ್ ಮಗುಚಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೂ ಸಮಸ್ಯೆಯಾಗಿದೆ. ಅಲ್ಲದೆ ಮಕ್ಕಳು ಸಹಿತ ರಸ್ತೆಯಲ್ಲಿ ಸಂಚರಿಸುವವರಿಗೆ ಬಾಯ್ದೆರೆದಿರುವ ಕೊಳವೆ ಬಾವಿ ಭೀತಿ ಸೃಷ್ಟಿಸುತ್ತಿದೆ. ಬಾಯ್ದೆರೆದುಕೊಂ ಡಿರುವ ಕೊಳವೆ ಬಾವಿಗಳನ್ನು ಮುಚ್ಚಬೇಕೆಂಬ ಕಾನೂನಿದ್ದರೂ ಇಲ್ಲಿ ಹಲವು ಸಮಯದಿಂದ ಇದು ಬಾಯ್ದೆರೆದುಕೊಂಡೇ ಇದೆ. ದುರಂತ ಸಂಭವಿಸುವ ಮೊದಲು ಪಂಚಾಯ ತ್ ಅಧಿಕಾರಿಗಳು ಮುಚ್ಚುವ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.






