ಕುಂಬಳೆ: ಅನಧಿಕೃತವಾಗಿ ಹೊಳೆಯಿಂದ ಹೊಯ್ಗೆ ಸಾಗಿಸುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲಾಯಿತೆಂದು ಆರೋಪಿಸಿ ಮೊಗ್ರಾಲ್ನಲ್ಲಿ ಮನೆಗೆ ಅತಿಕ್ರಮಿಸಿ ನುಗ್ಗಿ ಯುವಕನನ್ನು ಕೊಲೆಗೈಯ್ಯಲೆತ್ನಿಸ ಲಾಯಿತೆಂಬ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಗ್ರಾಲ್ ಕೆ.ಕೆ. ಪುರಂ ನಿವಾಸಿಗಳಾದ ಸನದ್ (31), ಗಫೂರ್ (34), ತನ್ಸೀಫ್ (27) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಬೈಜು ಕೆ ಥೋಮಸ್ರ ನಿರ್ದೇಶ ಪ್ರಕಾರ ಎಸ್ಐ ಅನಂತಕೃಷ್ಣನ್ ಆರ್. ಮೆನೋನ್ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳು ವಯ ನಾಡ್ನ ಸುಲ್ತಾನ್ ಬತ್ತೇರಿಯಲ್ಲಿ ತಲೆಮರೆಸಿ ಕೊಂಡು ವಾಸಿಸುತ್ತಿದ್ದಾರೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ನಿನ್ನೆ ಅಲ್ಲಿಗೆ ತೆರಳಿದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿ ರಾತ್ರಿ ವೇಳೆ ಕುಂಬಳೆ ಠಾಣೆಗೆ ತಲುಪಿಸಿದೆ.
ಮಾರ್ಚ್ 1ರಂದು ರಾತ್ರಿ 9 ಗಂಟೆ ವೇಳೆ ಮೊಗ್ರಾಲ್ ಲೀಗ್ ಕಚೇರಿ ಸಮೀಪದ ಬೈತುಲ್ ಸೂರೂರ್ನ ಅಬ್ದುಲ್ಲ ಅರ್ಶಾದ್ (35) ಎಂಬವರ ಮೇಲೆ ತಂಡ ಹಲ್ಲೆ ನಡೆಸಿತ್ತೆನ್ನಲಾಗಿದೆ. ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ ಅಬ್ದುಲ್ಲ ಅರ್ಶಾದ್ರ ಎದೆಗೆ ಬಡಿದು, ಕುತ್ತಿಗೆ ಅದುಮಿ ಕೊಲೆಗೈಯ್ಯಲೆತ್ನಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಇದರಂತೆ ಆರೋಪಿಗಳಾದ ಮೂವರ ವಿರುದ್ದ ಕುಂಬಳೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.






