ಅಪಘಾತಕ್ಕೀಡಾದ ಬೈಕ್ ಕಳವುಗೈದ ಆರೋಪಿ ಬಂಧನ

ಮಂಜೇಶ್ವರ: ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್ ಕಳವುಗೈದ ಆರೋಪಿ ಸೆರೆಗೀಡಾಗಿದ್ದಾನೆ. ಮೀಂಜ ಸಂತಡ್ಕ ನಿವಾಸಿ ಮುಹಮ್ಮದ್ ಮುನ್ನ (21) ಎಂಬಾತನನ್ನು ಮಂಜೇಶ್ವರ ಎಸ್‌ಐ  ವೈಷ್ಣವ್ ರಾಮಚಂದ್ರನ್ ಹಾಗೂ ತಂಡ ಬಂಧಿಸಿದೆ.

ಕರ್ನಾಟಕದ ಗದಗ ನಿವಾಸಿಯೂ ಕಾಸರಗೋಡು ನುಳ್ಳಿಪ್ಪಾಡಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಎಂ.ಎನ್. ಸಂತೋಷ್ ಎಂಬವರ ಬೈಕ್ ಕಳವುಗೈದ ಪ್ರಕರಣದಲ್ಲಿ ಮುಹಮ್ಮದ್ ಮುನ್ನನನ್ನು ಬಂಧಿಸಲಾಗಿದೆ. ಸಂತೋಷ್ ಚಲಾಯಿಸಿದ ಬೈಕ್ ಮೇ 1ರಂದು ರಾತ್ರಿ 9.30ಕ್ಕೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು.  ಕಾರಿನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದಿದ್ದು, ಇದರಿಂದ ಗಾಯಗೊಂಡ ಸಂತೋಷ್‌ರನ್ನು ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಬೈಕ್ ಕೊಂಡೊಯ್ಯಲು ಸಂತೋಷ್ ಉಪ್ಪಳಕ್ಕೆ ತಲುಪಿದಾಗ ಬೈಕ್ ಕಳವಿಗೀಡಾದ ವಿಷಯ ಅರಿವಿಗೆ ಬಂದಿತ್ತು. ಇದರಂತೆ ಸಂತೋಷ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ  ಆರಂಭಿಸಿದ್ದರು. ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯ ಗುರುತು ಹಚ್ಚಲಾಗಿತ್ತು. ಇದರಂತೆ ನಿನ್ನೆ ಮಧ್ಯಾಹ್ನ ಉಪ್ಪಳ ಬಳಿಯಿಂದ ಆರೋಪಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಬಳಿಕ ಆರೋಪಿಯನ್ನು ತನಿಖೆಗೊಳಪಡಿಸಿದಾಗ ಕಳವುಗೈದ ಬೈಕ್ ಉಪ್ಪಳದ ಅಂಡರ್ ಪಾಸ್‌ನ ಸಮೀಪ ಅಡಗಿಸಿಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್‌ನ್ನು ಬಳಿಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಬಂಧಿತ ಆರೋಪಿ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ  ಪೋಕ್ಸೋ ಕೇಸು ಹಾಗೂ ಬೇಕಲದಲ್ಲಿ ಕಳವು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page