ಕಾಸರಗೋಡು: ಮದ್ಯದಮಲಿನಲ್ಲಿ ಪತ್ನಿ ಹಾಗೂ ಸಂಬಂಧಿಕನಾದ ಯುವಕನ ದೇಹಕ್ಕೆ ಆಸಿಡ್ ಎರಚಿ ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುನ್ನಾಡ್ ಚಂಬಕ್ಕಾಡ್ ನಿವಾಸಿ ಜಾನಕಿ (54), ಸಹೋದರಿಯ ಪುತ್ರ ಸುರೇಶ್ ಎಂಬಿವರ ದೇಹಕ್ಕೆ ಆಸಿಡ್ ಎರಚಲಾಗಿದೆ. ಗಾಯಗೊಂಡ ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಮುನ್ನಾಡ್ ಚಂಬಕ್ಕಾಡ್‌ನಲ್ಲಿ ಘಟನೆ ನಡೆದಿದೆ. ಜಾನಕಿಯ ಪತಿ ರವೀಂದ್ರನ್ ಮದ್ಯಪಾನಿಯಾಗಿದ್ದು, ಮನೆಯಲ್ಲಿ ನಿತ್ಯ ಸಮಸ್ಯೆ ಸೃಷ್ಟಿಸುತ್ತಿರುವುದಾಗಿ ದೂರಲಾಗಿದೆ. ಇದರಿಂದ ಜಾನಕಿ ಹಾಗೂ ಮಕ್ಕಳು ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಅಲ್ಲಿಗೂ ತಲುಪಿ ರವೀಂದ್ರನ್ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮಂಗಳವಾರ ಸಂಜೆ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ಜಾನಕಿಯ ದೇಹಕ್ಕೆ ರವೀಂದ್ರನ್ ಆಸಿಡ್ ಎರಚಿದ್ದಾನೆ. ಈ ವೇಳೆ ಅಲ್ಲಿದ್ದ ಮಗಳ ಮೇಲೂ ಆಸಿಡ್ ಎರಚಲು ರವೀಂದ್ರನ್ ಯತ್ನಿಸಿದ್ದಾನೆ. ಈ ವೇಳೆ ಆಕೆ ಮನೆಯೊಳಗೆ ಓಡಿ ಅಪಾಯದಿಂದ ಪಾರಾಗಿದ್ದಾಳೆ. ಬೊಬ್ಬೆ ಕೇಳಿ ಜಾನಕಿಯ ಸಹೋದರಿಯ ಪುತ್ರ ಸುರೇಶ್ ಅಲ್ಲಿಗೆ ತಲುಪಿದ್ದನು. ಈ ವೇಳೆ ಆತನ ದೇಹಕ್ಕೂ ರವೀಂದ್ರನ್ ಆಸಿಡ್ ಎರಚಿದ್ದಾನೆನ್ನಲಾಗಿದೆ. ಇದರಿಂದ ಗಾಯಗೊಂಡ ಇಬ್ಬರನ್ನು ನಾಗರಿಕರು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದ್ದಾರೆ. ಅನಂತರ ಮನೆ ಸಮೀಪ ಸೇರಿದ ನಾಗರಿಕರೊಂದಿಗೆ ಜಗಳಕ್ಕೆ ಮುಂದಾದ ರವೀಂದ್ರನ್ ನನ್ನು ಬೇಡಗಂ ಪೊಲೀಸರು ತಲುಪಿ ಕಸ್ಟಡಿಗೆ ತೆಗೆದುಕೊಂಡಿದ್ದರು.







