ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆಗೆ ಅದ್ಧೂರಿ ಚಾಲನೆ: ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯಲಾಗುವುದು- ಕೆ.ಸಿ. ವೇಣುಗೋಪಾಲನ್

ಕುಂಬಳೆ: ವಿಧಾನಸಭಾ ಚುನಾವಣೆ ಯಲ್ಲಿ ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯುವುದೇ ಪ್ರಥಮ ಕಾರ್ಯವೆಂದು ಎಐಸಿಸಿ ಜನರಲ್ ಸೆಕ್ರೆಟರಿ, ಸಂಸದ ಕೆ.ಸಿ. ವೇಣುಗೋಪಾಲ್ ನುಡಿದರು.  ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾಥಾ ನಾಯಕ ವಿ.ಡಿ. ಸತೀಶನ್‌ರಿಗೆ ಐಕ್ಯರಂಗದ ಘಟಕ ಪಕ್ಷಗಳ ಪತಾಕೆಗಳು ಒಳಗೊಂಡ ಧ್ವಜವನ್ನು ಹಸ್ತಾಂತರಿಸಿ ಅವರು ಉದ್ಘಾಟನೆ ನೆರವೇರಿಸಿದರು. ಯಾತ್ರೆ ಮಾರ್ಚ್ 7ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳುವಾಗ ರಾಜ್ಯದ ಎಡರಂಗ ಸರಕಾರ ಹೊರ ಹೋಗುವುದರ ರಣಕಹಳೆ ಮೊಳಗಲಿದೆ. ಪಿಣರಾಯಿ ವಿಜಯನ್ ಸರಕಾರ ದೇವಸ್ಥಾನದಿಂದ ಕಳವು ಗೈದವರ ವಿರುದ್ಧ ಎಸ್‌ಐಟಿಯಿಂದ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಮರ್ಪಿಸದಿರುವುದು ಸಿಪಿಎಂ ಮುಖಂಡರನ್ನು ರಕ್ಷಿಸಲಿರುವ ತಂತ್ರದ ಭಾಗವಾಗಿ ಎಂದು ವೇಣುಗೋಪಾಲ್ ಆರೋಪಿಸಿದರು. ಆದುದರಿಂದಲೇ ಒಬ್ಬರ ಹಿಂದೆ ಒಬ್ಬರಂತೆ ಈಗ ಜೈಲಿನಿಂದ ಹೊರ ಬರುತ್ತಿದ್ದಾರೆ. ಇದಕ್ಕೆಲ್ಲಾ ಲೆಕ್ಕ ಹೇಳಲಿಕ್ಕಿದೆ ಎಂದು, ಕೃಪೇಶ್ ಹಾಗೂ ಶರತ್‌ಲಾಲ್‌ನ ಮಣ್ಣಿನಲ್ಲಿ ನಿಂತು ನಾನು ಇದನ್ನು ಹೇಳುತ್ತಿರುವುದಾಗಿ ಅವರು ನುಡಿದರು. ಪಿಣರಾಯಿ ವಿಜಯನ್‌ರಿಂದ ಜನರು ಸಂಕಷ್ಟಕ್ಕೀಡಾಗಿದ್ದು, ಯುಡಿಎಫ್ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್‌ನಲ್ಲಿ ಜಯ ಗಳಿಸಿ ಆಗಿದೆ. ಫೈನಲ್‌ನಲ್ಲಿ ಕೂಡಾ ಜಯ ಗಳಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಐಕ್ಯರಂಗ ಅಧಿಕಾರಕ್ಕೆ ಬಂದರೆ ಜನರು ಆಗ್ರಹಿಸುವ ಆಡಳಿತ ಉಂಟಾಗಲಿದೆ. ಕಾಲದೊಂದಿಗೆ ಬದಲಾಗಲಿರುವ ಕೇರಳದ ಮೋಹ ಹತ್ತು ವರ್ಷದಿಂದ ಪಿಣರಾಯಿ ಸರಕಾರ ಕಟ್ಟಿ ಹಾಕಿದೆ ಎಂದು ಐಕ್ಯರಂಗ ಸರಕಾರ ಅಧಿಕಾರಕ್ಕೆ ಬಂದರೆ ಪಾರದರ್ಶಕವಾದ, ಶಾಂತಿಯುತವಾದ ಜನಕ್ಷೇಮ ಯೋಜನೆಗಳು ನಾಡಿಗೆ ಸಮರ್ಪಿಸಲಿದೆ ಎಂದು ಅವರು ನುಡಿದರು.

ರಾಜ್ಯದಲ್ಲಿ ಹಣವಿಲ್ಲದ ಕಾರಣ ಅಭಿವೃದ್ಧಿ ಮೊಟಕಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳುತ್ತಿರುವುದಾಗಿಯೂ ವೇಣುಗೋಪಾಲ್ ನುಡಿದರು. ಹಣವಿಲ್ಲದ ಕಾರಣವಲ್ಲ, ಇದ್ದ ಹಣವನ್ನು ಕದ್ದು ಕೊಂಡೊಯ್ದು ಪಕ್ಷ ಹಾಗೂ ಪಕ್ಷದ ಮುಖಂಡರು ದಪ್ಪಗಾಗುತ್ತಿದ್ದು ಆದರೆ ಕೇರಳ ಕ್ಷಯಿಸುತ್ತಿದೆ ಎಂದು ವೇಣು ಗೋಪಾಲ್ ನುಡಿದರು.

ಆಂಟನಿ, ಕರುಣಾಕರನ್, ಉಮ್ಮನ್ ಚಾಂಡಿಯವರೆಲ್ಲ ಮುಖ್ಯಮಂತ್ರಿಯಾಗಿ ರುವಾಗ ಕೈಗೊಂಡ ಅಭಿವೃದ್ಧಿ ಯೋಜನೆಗಳು ಅಲ್ಲದೆ ಕೇರಳದಲ್ಲಿ ಯಾವ ಯೋಜನೆ ಕಳೆದ ಹತ್ತು ವರ್ಷ ದಿಂದ ನಡೆದಿದೆ ಎಂದು ವಿಧಾನಸಭೆ ಯಲ್ಲಿ ನಾನು ಪ್ರಶ್ನಿಸಿದಾಗ ಮುಖ್ಯಮಂತ್ರಿ ಯಾವುದೇ ಉತ್ತರ ನೀಡಲಿಲ್ಲವೆಂದು ಮುಸ್ಲಿಂ ಲೀಗ್ ಮುಖಂಡ ಪಿ. ಕುಂಞಾಲಿಕುಟ್ಟಿ ಅಪಹಾಸ್ಯ ಮಾಡಿ ದರು. ಕೆಪಿಸಿಸಿ ಅಧ್ಯಕ್ಷ ಸನ್ನಿಜೋಸೆಫ್ ಅಧ್ಯಕ್ಷತೆ ವಹಿಸಿದರು. ಐಕ್ಯರಂಗದ ಸಂಚಾಲಕ ಅಡೂರ್ ಪ್ರಕಾಶ್, ಮೈತ್ರಿ ಪಕ್ಷದ ಪ್ರಮುಖ ಮುಖಂಡರು ಮಾತನಾಡಿದರು. ಬಳಿಕ ಕಾಸರಗೋಡಿ ನಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಯಿತು.

You cannot copy contents of this page