ಚರಂಡಿಗೆ ಮಲಿನ ಜಲ ಹರಿಯಬಿಟ್ಟ ಅಪಾರ್ಟ್‌ಮೆಂಟ್ ಮಾಲಕನಿಗೆ ದಂಡ

ಉಪ್ಪಳ: ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಉಪ್ಪಳ ಪತ್ವಾಡಿ ರಸ್ತೆಯ ಚೆರಂಡಿಗೆ ಮಲಿನ ಜಲವನ್ನು ಹರಿಯಬಿಟ್ಟ ಬಗ್ಗೆ ನೀಡಿದ ದೂರಿನಂತೆ ಕಾಸರಗೋಡು ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಲವನ್ನು ಹರಿಯಬಿಟ್ಟ ಅಪಾರ್ಟ್‌ಮೆಂಟ್ ಮಾಲಕನನ್ನು ಪತ್ತೆಹಚ್ಚಿ ೨೦,೦೦೦ ರೂ. ದಂಡ ವಸೂಲು ಮಾಡಿದೆ. ಮಲಿನಜಲ  ಹರಿದುಹೋಗುವಂತೆ ಮಾಡಲು ಸಿದ್ಧಪಡಿಸಿದ್ದ ಪೈಪ್‌ಲೈನನ್ನು ನಾಲ್ಕು ದಿನದೊಳಗೆ ತೆರವುಗೊಳಿಸಬೇಕೆಂದು ನಿರ್ದೇಶಿಸಲಾಗಿದೆ.

ಪತ್ವಾಡಿ ಪ್ರಧಾನ ರಸ್ತೆ ಬದಿಯ ಖಾಸಗಿ ಸ್ಥಳದಲ್ಲಿ ಜೈವಿಕ ಸಹಿತ ತ್ಯಾಜ್ಯಗಳನ್ನು ಉಪೇಕ್ಷಿಸುವುದಕ್ಕೆ ಸೌಕರ್ಯ ಮಾಡಿಕೊಟ್ಟ ಸ್ಥಳದ ಮಾಲಕನಿಗೂ ದಂಡ ಹೇರಲಾಗಿದೆ. ಪೇಟೆಯ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ವಿತರಿಸಲು ಕರ್ನಾಟಕ ನೋಂದಾವಣೆಯ ವ್ಯಾನ್‌ಗಳಲ್ಲಿನ ತ್ಯಾಜ್ಯಗಳನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿದ ಹಿನ್ನೆಲೆಯಲ್ಲಿ ಚಾಲಕನಿಂದ ೫,೦೦೦ ರೂ. ದಂಡ ವಸೂಲು ಮಾಡಲಾಗಿದೆ. ತಪಾಸಣೆಯಲ್ಲಿ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಸದಸ್ಯರಾದ ಟಿ.ಸಿ. ಶೈಲೇಶ್, ವಿ.ಎಂ. ಜೋಸ್, ಹೆಲ್ತ್ ಇನ್ಸ್‌ಪೆಕ್ಟರ್ ಕೆ. ರಜನಿ ಭಾಗವಹಿಸಿದರು.

You cannot copy contents of this page