ಆಪರೇಶನ್ ತೂಫಾನ್: ಶಾಲಾ ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆಗಳನ್ನು ಪೂರೈಸುವ ಯುವಕ ಸೆರೆ

ಕಾಸರಗೋಡು: ಶಾಲಾ ವಿದ್ಯಾರ್ಥಿಗಳಿಗೆ  ಮಾದಕ ಮಾತ್ರೆಗಳನ್ನು ಪೂರೈಸುತ್ತಿದ್ದ ಯುವಕನನ್ನು ಮೇಲ್ಪರಂಬ ಠಾಣೆಯ ಎಸ್‌ಐ ಪಿ.ಕೆ. ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಉತ್ತರಪ್ರದೇಶದ ಅಂರೊಬಾ ದ್ವಾರ್ಸಿ ನಿವಾಸಿ ಮೊಹಮ್ಮದ್ ನಸೀರ್ (19) ಬಂಧಿತ ಆರೋಪಿ. ಕಳನಾಡಿನ  14ರ ಹರೆಯದ ವಿದ್ಯಾರ್ಥಿಗೆ ಮಾದಕಮಾತ್ರೆಗಳನ್ನು ನೀಡುತ್ತಿದ್ದ ವೇಳೆ ಆರೋಪಿಯನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ.

ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಮಾದಕದ್ರವ್ಯ ದಂಧೆಯನ್ನು ಪತ್ತೆಹಚ್ಚಿ ಅದನ್ನು ಬೇರು ಸಹಿತ ಕಿತ್ತು ಹಾಕಲು ರಾಜ್ಯ ಗೃಹ ಇಲಾಖೆ ರಾಜ್ಯಾದ್ಯಂತ  ನಿನ್ನೆಯಿಂದ ಆರಂಭಿಸಿರುವ ‘ತೂಫಾನ್ ನಾರ್ಕೋ ಹಂಟ್ ಆಪರೇಶನ್’ ಕಾರ್ಯಾಚರಣೆ ಯಂತೆ ಮೇಲ್ಪರಂಬ ಪೊಲೀಸರು ಈ ದಾಳಿ ನಡೆಸಿದ್ದಾರೆ. ಆರೋಪಿ ವಿದ್ಯಾರ್ಥಿಗೆ ನೀಡಿದ ಮಾದಕ ಮಾತ್ರೆಗಳು ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಹೀಗೆ  ಮೂರು ಮಾತ್ರೆಗಳನ್ನು ಆತ ವಿದ್ಯಾರ್ಥಿಗೆ ನೀಡಿದ್ದಾನೆ. ಮಾನಸಿಕ  ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ವೈದ್ಯರುಗಳ ನಿರ್ದೇಶ ಪ್ರಕಾರ  ನೀಡಲಾಗುವ ಮಾತ್ರೆಗಳು ಇದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಆರೋಪಿಯ ದೇಹ ತಪಾಸಣೆ ನಡೆಸಿದಾಗ ಆತನ ಪ್ಯಾಂಟ್‌ನ ಜೇಬಿನಿಂದಲೂ ಇಂತಹ ಎಂಟು ಸ್ಟ್ರಿಪ್ ಮಾತ್ರೆಗಳು ಪತ್ತೆಯಾಗಿ ವೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯ ವಿರುದ್ಧ ಜುವೈನಲ್ ಜಸ್ಟೀಸ್ ಕೇರ್ ಆಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಆತನನ್ನು ನಂತರ ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(2)ದ ಆದೇಶ ಪ್ರಕಾರ ನ್ಯಾಯಾಂಗ ಬಂಧನ ದಲ್ಲಿರಿಸಲಾಗಿದೆ. ಈ ಮಾತ್ರೆ ಪಡೆದ ವಿದ್ಯಾರ್ಥಿಯ ಹೆತ್ತವರನ್ನು ಪೊಲೀಸರು ಕರೆಸಿ  ವಿಷಯ ತಿಳಿಸಿದ ಬಳಿಕ ಅವರೊಂದಿಗೆ ಕಳುಹಿಸಿಕೊಡಲಾಗಿದೆ.

You cannot copy contents of this page