ಕಾಸರಗೋಡು: ಆನ್‌ಲೈನ್ ಮೂಲಕ ಆರ್ಥಿಕ ವಂಚನೆ ನಡೆಸುತ್ತಿರುವ ವಂಚಕರಿಗಾಗಿ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವವರನ್ನು ಪತ್ತೆಹಚ್ಚಲು ಆಪರೇಶನ್ ಸೈ-ಹಂಟ್ ಎಂಬ ಹೆಸರಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದು, ಇದರಂತೆ ನಿನ್ನೆ ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 36 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದರಲ್ಲಿ ಅತೀ ಹೆಚ್ಚು ಎಂಬಂತೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲುಗೊಂಡಿವೆ.
ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಮತ್ತು ಸೈಬರ್ ಸೆಲ್‌ನ ಸಹಾಯದೊಂದಿಗೆ ಎಎಸ್‌ಪಿ ಮತ್ತು ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸುತ್ತಿದೆ. ಇದರಂತೆ ನಿನ್ನೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಾಗಿ ಒಟ್ಟು 104 ಕೇಂದ್ರಗಳಲ್ಲಿ ದಾಳಿ ಮತ್ತು ತಪಾಸಣೆ ನಡೆಸಲಾಗಿದೆ.ಇದಕ್ಕೆ ಸಂಬಂಧಿಸಿ 34 ಮಂದಿಯನ್ನು ಪೊಲೀ ಸರು ಸೆರೆಹಿಡಿದಿದ್ದಾರೆ. ದಾಳಿಯ ಮೊದಲು ಸೈಬರ್ ಅಪರಾಧ ಕೃತ್ಯಗಳಲ್ಲಿ ಒಳಗೊಂಡವರ ಬ್ಯಾಂಕ್ ಖಾತೆಗಳನ್ನು ಸೈಬರ್ ತಜ್ಞರ ನೇತೃತ್ವದಲ್ಲಿ ಬಳಿಕ ಗುರುತಿಸ ಲಾಗಿತ್ತು. ಅದರ ಆಧಾರದಲ್ಲಿ ಈ ಪೊಲೀಸ್ ದಾಳಿ ಆರಂಭಿಸಲಾಗಿದೆ.
ಇದರಂತೆ ಕಾಸರಗೋಡು ಪೊಲೀಸ್ ಉಪ ವಿಭಾಗದಲ್ಲಿ ೨೦, ಬೇಕಲ ಪೊಲೀಸ್ ಉಪ ವಿಭಾಗದಲ್ಲಿ 9 ಮತ್ತು ಹೊಸದುರ್ಗ ಪೊಲೀಸ್ ಉಪವಿಭಾಗದಲ್ಲಿ ಇಂತಹ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ.
ಸೆರೆಗೊಳಗಾದವರ ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರ ತಂಡ ದವರು ಬಾಡಿಗೆಗೆ ಪಡೆದು ಕೊಂಡು, ಅಂತಹ ಖಾತೆಗಳಿಗೆ ತಾವು ವಂಚನೆ ಗೈದ ಹಣವನ್ನು ತಲುಪುವಂತೆ ಮಾಡು ತ್ತಾರೆ. ನಂತರ ಈ ಬಾಡಿಗೆ ಬ್ಯಾಂಕ್ ಖಾತೆದಾರರು ಆ ಹಣವನ್ನು ವಂಚಕರ ಬ್ಯಾಂಕ್ ಖಾತೆಗಳಿಗೆ ಕಳುಹಿಸಿಕೊಡು ತ್ತಾರೆ. ಇದಕ್ಕಾಗಿ ಇಂತಹ ಬಾಡಿಗೆ ಬ್ಯಾಂಕ್ ಖಾತೆದಾರರಿಗೆ ಇಂತಹ ಆರ್ಥಿಕ ವಂಚನೆಗಾರರು ನಿಗದಿತ ಸಂಖ್ಯೆಯ ಕಮಿಶನ್ ಹಣ ನೀಡುತ್ತಾರೆ. ಇದಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಲ್ಲಿ ಬಾಡಿಗೆ ಬ್ಯಾಂಕ್ ಖಾತೆದಾರರೇ ನೇರವಾಗಿ ಸಿಲುಕಿ ಕೊಳ್ಳುತ್ತಾರೆ. ನಿಜವಾದ ಆರ್ಥಿಕ ವಂಚನೆಗಾರರು ಈ ಪ್ರಕರಣಗಳಲ್ಲಿ ಸಿಲುಕಿಕೊಳ್ಳದೆ ತಪ್ಪಿಸಿಕೊಳ್ಳುತ್ತಾರೆ. ಹೀಗೆ ಹಣದ ಆಸೆಗಾಗಿ ಸೈಬರ್ ವಂಚನೆಗಾರರಿಗಾಗಿ ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಕೊಡುವ ಅದೆಷ್ಟೋ ಮಂದಿ ಇದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೆರೆಹಿಡಿದವರ ಬ್ಯಾಂಕ್ ಖಾತೆಯಿಂದ ಆ ಹಣ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆಯೆಂಬ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ಸಮಗ್ರ ತನಿಖೆ ಆರಂಭಿಸಿದ್ದು, ಅದರ ಜಾಡು ಹಿಡಿದು ಸೈಬರ್ ವಂಚನೆಗಾರರನ್ನು ತಮ್ಮ ಬಲೆಗೆ ಬೀಳಿಸುವ ತಂತ್ರಗಾರಿಕೆಯಲ್ಲಿ ಪೊಲೀಸರು ತೊಡಗಿದ್ದಾರೆ.






