ಕುಂಬಳೆ ಪಂ. ಕೊಪಾಡಿ ಕಡಪ್ಪುರ ವಾರ್ಡ್‌ನಲ್ಲಿ ಅಭಿವೃದ್ಧಿಯ ಭರವಸೆಯೊಂದಿಗೆ ಮತ ಯಾಚಿಸಿ ಬಿಜೆಪಿ ಅಭ್ಯರ್ಥಿ ವಿಕ್ರಂ ಪೈ ಮತದಾರರ ಬಳಿಗೆ

ಕುಂಬಳೆ: ಕುಂಬಳೆ ಪಂಚಾಯತ್‌ನಲ್ಲಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಕಡಪ್ಪುರ ೧೭ನೇ ವಾರ್ಡ್‌ನಲ್ಲಿ ಪ್ರಚಾರ ತಾರಕಕ್ಕೇರಿದೆ. ಎಲ್‌ಡಿಎಫ್, ಯುಡಿಎಫ್, ಬಿಜೆಪಿ ಇಲ್ಲಿ ಸ್ಪರ್ಧಿಸುತ್ತಿದೆ. ಎಡರಂಗದಿಂದ ಅಬ್ದುಲ್ ಸಲೀಂ, ಐಕ್ಯರಂಗದಿಂದ  ಹಮೀದ್ ಕೊಪಾಡಿ ಹಾಗೂ ಬಿಜೆಪಿಯಿಂದ  ಕುಂಬಳೆಯ ಪ್ರಮುಖ ಉದ್ಯಮಿ ವಿಕ್ರಂ ಪೈ ಸ್ಪರ್ಧಿಸುತ್ತಿದ್ದಾರೆ. ಪ್ರಾಮಾಣಿಕತೆಯುಳ್ಳ ಸಾಮಾಜಿಕ ಕಾರ್ಯಕರ್ತನೆಂದು ನಾಗರಿಕರು ಅಂಗೀಕರಿಸಿರುವ ವಿಕ್ರಂ ಪೈಯವರು  ಪ್ರಚಾರಕಣದಲ್ಲಿದ್ದು, ತಾನು ಇಲ್ಲಿ ಗೆಲುವು ಸಾಧಿಸಿದರೆ ಈ ನಾಡಿನ ಅಭಿವೃದ್ಧಿಗಾಗಿ ಪ್ರಯತ್ನಿಸುವುದಾಗಿ ಮತದಾರರಿಗೆ ಭರವಸೆ ನೀಡುತ್ತಿದ್ದಾರೆ. ಕೊಪಾಡಿ ಕಡಪ್ಪುರ ವಾರ್ಡ್‌ನ್ನು ಅಭಿವೃದ್ಧಿಗೊಳಿಸಲು ಕೇರಳದಲ್ಲಿ ಅದಲುಬದಲಾಗಿ ಆಡಳಿತ ನಡೆಸಿದ ಎಡ ಹಾಗೂ ಐಕ್ಯರಂಗಗಳು, ಪಂಚಾಯತ್‌ನಲ್ಲಿ ಆಡಳಿತ ನಡೆಸಿದ ಐಕ್ಯರಂಗ ಯಾವ ಕ್ರಮ ಕೈಗೊಂಡಿದೆ ಎಂದು ಅವರು ಕೇಳುತ್ತಿಲ್ಲ. ಅಲ್ಲದೆ ಅದರ ಹೆಸರಲ್ಲಿ ಯಾವುದೇ ಒಕ್ಕೂಟವನ್ನೂ ಅವರು ಆರೋಪಿಸುತ್ತಿಲ್ಲ. ಆದರೆ  ಇದೇ ವೇಳೆ ಕೊಪಾಡಿ  ಕಡಪ್ಪುರ ವಾರ್ಡ್‌ನ ಹಲವಾರು ಸಮಸ್ಯೆಗಳನ್ನು ಅವರು ಒಂದೊಂದಾಗಿ ವಿವರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರದ ಸಹಾಯದಿಂದ ವಿವಿಧ ಯೋಜನೆಗಳ ಮುಖಾಂತರ ವಾರ್ಡ್‌ನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದಾಗಿ ಅವರು ಮತದಾರರಲ್ಲಿ ತಿಳಿಸುತ್ತಿದ್ದಾರೆ. ನ್ಯಾಯ ಹಾಗೂ ಸತ್ಯಕ್ಕಾಗಿ ಎಲ್ಲಿವರೆಗೆ ಬೇಕಾದರೂ ಹೋಗಲಿರುವ ಸಾಮರ್ಥ್ಯವುಳ್ಳ ಕುಂಬಳೆಯ ಏಕ ಸಾಮಾಜಿಕ ಕಾರ್ಯಕರ್ತ ವಿಕ್ರಂ ಪೈ ಆಗಿದ್ದಾರೆಂದು ಇಲ್ಲಿನ ಜನರಿಗೆ ತಿಳಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮೀನು ಕಾರ್ಮಿಕರು ಇರುವ ಈ ವಾರ್ಡ್‌ನಲ್ಲಿ ಹಲವು ಕುಟುಂಬಗಳಿಗೆ ಮನೆಯಿಲ್ಲ. ಅಲ್ಲದೆ ಇದುವರೆಗೆ ಶುದ್ಧ ನೀರು ಇವರಿಗೆ ಲಭ್ಯಗೊಳಿಸಿಲ್ಲ. ಚಿಕಿತ್ಸಾ ಸೌಕರ್ಯವಿಲ್ಲ, ಪ್ರಯಾಣ ಸೌಕರ್ಯವಿಲ್ಲ, ಹಲವು ಮನೆಗಳಿಗೆ ಗ್ಯಾಸ್ ಸಂಪರ್ಕವಿಲ್ಲ. ಬತ್ತೇರಿ ವಲಯದಲ್ಲಿ ನೂರಾರು ಮನೆಗಳಿಗೆ ದಾರಿಯೂ ಇಲ್ಲ. ಮೀನು ಕಾರ್ಮಿಕರಿಗೆ ಉದ್ಯೋಗ ಸೌಕರ್ಯ ಲಭಿಸುತ್ತಿಲ್ಲ.

ತಮ್ಮ ಕಸುಬಿಗೆ ಬೇಕಾದ ಸಲಕರಣೆಗಳನ್ನು ಖರೀದಿಸಲು ಆರ್ಥಿಕ ಸಹಾಯವಿಲ್ಲದೆ ಹಲವು ಮಂದಿ ಸಂಕಷ್ಟದಲ್ಲಿದ್ದಾರೆ. ಶಿರಿಯದಲ್ಲಿ ಪುಲಿಮುಟ್ ಇಲ್ಲದಿರುವುದರಿಂದ ಮೀನು ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇವುಗಳಿಗೆಲ್ಲಾ ಪ್ರಧಾನಮಂತ್ರಿಯವರ ಪ್ರತ್ಯೇಕ ಯೋಜನೆಗಳಿವೆ. ತಾನು ಗೆಲುವು ಸಾಧಿಸಿದರೆ ಈ ಎಲ್ಲಾ ಸಮಸ್ಯೆಗಳಿಗೆ ಕೇಂದ್ರ ಸರಕಾರವನ್ನು ಸಂಪರ್ಕಿಸಿ ಪರಿಹಾರ ಕಾಣುವುದಾಗಿ ಅವರು ತಿಳಿಸುತ್ತಿದ್ದಾರೆ. ಕೇಂದ್ರ ಸರಕಾರದ ಸಹಾಯಗಳನ್ನು ಎಲ್ಲರಿಗೂ ಸಮಾನವಾಗಿ ಲಭ್ಯಗೊಳಿಸುವುದು ತನ್ನ ಉದ್ದೇಶವಾಗಿದೆ ಎಂದು ವಿಕ್ರಂ ಪೈ ತಿಳಿಸುತ್ತಿದ್ದಾರೆ. ನಾಡಿನ ಅಭಿವೃದ್ಧಿ ಹಾಗೂ ಪ್ರಗತಿಗಾಗಿ ತಾನು ನಡೆಸುವ ಪ್ರಯತ್ನಗಳಿಗೆ ಮತದಾರರ ಸಹಕಾರವನ್ನು ಅವರು ವಿನಂತಿಸುತ್ತಿದ್ದಾರೆ.

RELATED NEWS

You cannot copy contents of this page