ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಂದು ಹಲವು ದಿನಗಳು ಕಳೆದರೂ ತಿರುವನಂತಪುರ ಕಾರ್ಪೊರೇಶನ್‌ನ ಮೇಯರ್ ಅಭ್ಯರ್ಥಿ ಯಾರಾಗುವರೆಂಬ ವಿಷಯದಲ್ಲಿ ತೀರ್ಮಾನ ವಿಳಂಬವಾಗುತ್ತಿದೆ. ಬಿಜೆಪಿಗೆ ಭಾರೀ ಬಹುಮತ ಲಭಿಸಿದ ಕಾರ್ಪೊರೇಶನ್‌ನ ಮೇಯರ್ ಅಭ್ಯರ್ಥಿಯನ್ನು ತೀರ್ಮಾನಿಸಲು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡಲೇ ದೆಹಲಿಗೆ ತೆರಳುವರು ಎಂಬ ಮಾಹಿತಿ ಲಭಿಸಿದೆ. ದೆಹಲಿಯಿಂದ ಹಿಂತಿರುಗಿದ ಬಳಿಕವಷ್ಟೇ ರಾಜ್ಯದಲ್ಲಿ ಚರ್ಚೆಗಳು ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಚುನಾವಣೆ ಅವಲೋಕನಕ್ಕಾಗಿ ಮಂಡಲ ಪದಾಧಿಕಾರಿಗಳುವರೆಗಿರುವ ಮುಖಂಡರ, ಜಿಲ್ಲಾ ಕೋರ್ ಕಮಿಟಿ ಸಭೆ ಜರಗಲಿದೆ.
ಕೇಂದ್ರ ನೇತೃತ್ವದ ಅಭಿಪ್ರಾಯ ತಿಳಿದ ಬಳಿಕವಷ್ಟೇ ಮುಂದಿನ ತೀರ್ಮಾನ ಉಂಟಾಗಲಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ನಿವೃತ್ತ ಡಿಜಿಪಿಯಾಗಿದ್ದ ಆರ್. ಶ್ರೀಲೇಖ, ರಾಜ್ಯ ಕಾರ್ಯದರ್ಶಿ ವಿ.ವಿ. ರಾಜೇಶ್ ಎಂಬಿವರ ಹೆಸರುಗಳು ಪರಿ ಗಣನೆಯಲ್ಲಿದೆಯಾದರೂ ಕೇಂದ್ರ ನೇತೃತ್ವದ ಮುಂದೆ ಆರ್‌ಎಸ್‌ಎಸ್ ಮುಂದಿಟ್ಟಿರುವ ಹೆಸರುಗಳನ್ನು ಕೂಡಾ ಪರಿಶೀಲಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಉಂ ಟಾಗಲಿದೆ. ಮೇಯರ್ ಸ್ಥಾನಕ್ಕೆ ಓರ್ವ ಸರ್ಪ್ರೈಸ್ ವ್ಯಕ್ತಿಯನ್ನು ಪಕ್ಷ ಪ್ರತಿನಿಧಿಯಾಗಿ ಘೋಷಿಸಲಿರುವ ಸಾಧ್ಯತೆಯನ್ನು ಕೂಡಾ ತಳ್ಳಿಹಾಕಲಾಗುವುದಿಲ್ಲ. ಮಾಜಿ ಕೌನ್ಸಿಲ್‌ಗಳಲ್ಲಿ ಸದಸ್ಯರಾದವರು ಹೆಚ್ಚಿನವರು ಈಗಲೂ ಆಯ್ಕೆಯಾಗಿದ್ದು ಅನುಭವದ ಆಧಾರದಲ್ಲಿ ಪರಿಗಣಿಸುವುದಾದರೆ ಈ ಸದಸ್ಯರಲ್ಲಿ ಹೆಚ್ಚಿನವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷಸ್ಥಾನಗಳು ಲಭಿಸುವ ಸಾಧ್ಯತೆ ಇದೆ.







