ಕಾಸರಗೋಡು: ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡಕ್ಕೆ ಲಿಫ್ಟ್ ನಿರ್ಮಿಸಲು ತೋಡಲಾದ ನೀರು ತುಂಬಿದ ಹೊಂಡದಲ್ಲಿ ಮೊನ್ನೆರಾತ್ರಿ ಪತ್ತೆಯಾದ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರಿಗೆ ಲಭಿಸಿದ್ದು, ಇದರಲ್ಲಿ ವ್ಯಕ್ತಿಯ ಸಾವು ಕೊಲೆಯಾಗಿದೆ ಯೆಂದು ಸ್ಪಷ್ಟಗೊಂಡಿದೆ. ಮಾತ್ರವಲ್ಲ ಕೊಲೆಗೈಯ್ಯಲ್ಪಟ್ಟ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಮೃತ ವ್ಯಕ್ತಿ ಕರ್ನಾಟಕದ ಗದಗ ಜಿಲ್ಲೆಯ ಬಲೇಶ್ವರ ಬಾಲಹೊಸೂರು ನಿವಾಸಿ ಚಂದ್ರಶೇಖರ್ ಸುರೇಶ್ ಪಟ್ಟಾಡ್ (38) ಎಂಬವರೆಂದು ಗುರುತಿಸಲಾಗಿದೆ. ಇವರು ವಲಸೆ ಕಾರ್ಮಿಕನಾಗಿದ್ದರು. ಇವರ ಮೃತದೇಹ ಮೊನ್ನೆ ರಾತ್ರಿ ಲಿಫ್ಟ್‌ನ ಹೊಂಡದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕಟ್ಟಡದ ಮಾಲಕನ ಪುತ್ರ ನೀಡಿದ ದೂರಿನಂತೆ ನಗರಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಇದು ಕೊಲೆಯಾಗಿದೆಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಪಷ್ಟಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಬಳಿಕ ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ ಈ ಕೊಲೆಕೃತ್ಯದಲ್ಲಿ ಶಾಮೀಲಾಗಿ ರುವುದಾಗಿ ಸಂಶಯಿಸಲಾಗುತ್ತಿರುವ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಕಾಸರಗೋಡಿನ ವಿವಿಧೆಡೆಗಳಲ್ಲಿ ವಾಸಿ ಸುತ್ತಿರುವ ಕರ್ನಾಟಕದ ವಲಸೆ ಕಾರ್ಮಿಕರನ್ನು ವಿಚಾರಣೆಗೊಳಪಡಿಸಿ ಅವರಿಂದ ಲಭಿಸಿದ ಮಾಹಿತಿಗಳಿಂದ ಕೊಲೆಗೈಯ್ಯಲ್ಪಟ್ಟ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಪತ್ತೆಯಾದ ಆಧಾರ್ ಕಾರ್ಡ್‌ನ ಜಾಡು ಹಿಡಿದು ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಶಂಕಿಸಲಾಗುತ್ತಿರುವ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಇಬ್ಬರ ಹೊರತಾಗಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಹಾಗೂ ಕೊಲೆಗೆ ಕಾರಣದ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಯುವಕನನ್ನು ತಲೆಗೆ ಹೊಡೆದು ಕೊಲೆಗೈದು ಮೃತದೇಹವನ್ನು ಎಳೆದು ತಂದು ಲಿಫ್ಟ್‌ನ ಹೊಂಡಕ್ಕೆ ಹಾಕಿರ ಬಹುದೆಂಬ ಸಂಶಯವನ್ನು ಪೊಲೀಸರು ಮೊದಲೇ ವ್ಯಕ್ತಪಡಿಸಿದ್ದರು. ಕೊಲೆ ನಡೆದ ಕಟ್ಟಡದಲ್ಲಿ ರಾತ್ರಿ ವೇಳೆಯಲ್ಲಿ ವಲಸೆ ಕಾರ್ಮಿಕರು ನಿದ್ರಿಸುತ್ತಿದ್ದಾರೆ. ಇದರಲ್ಲಿ ಕೆಲವರು ಮದ್ಯಪಾನಿಗ ಳಾಗಿದ್ದು, ಮದ್ಯದಮಲಿನಿಂದ ಅವರು ಪರಸ್ಪರ ಜಗಳವಾಡುತ್ತಿರುವುದು ಇತ್ತೀಚೆಗಿನಿಂದ ಸಾಮಾನ್ಯವಾಗಿದೆ. ಹೀಗೆ ನಡೆದ ಜಗಳ ವೇಳೆ ಚಂದ್ರಶೇಖರ ಕೊಲೆಗೈಯ್ಯಲ್ಪಟ್ಟಿರಬಹುದೆಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.






