ನಾಪತ್ತೆಯಾದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕೂಡ್ಲು ಆರ್.ಡಿ.ನಗರ ಬಳಿ ನಡೆದಿದೆ. ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ದಿ| ಮಾಧವ- ಲಕ್ಷ್ಮಿ ದಂಪತಿ ಪುತ್ರ ವಿನಾಯಕ ಕೆ. (25) ಸಾವನ್ನಪ್ಪಿದ ಯುವಕ. ಕೂಲಿ ಕಾರ್ಮಿಕನಾಗಿರುವ ವಿನಾಯಕ ಕೂಡ್ಲು ಗೋಪಾಲಕೃಷ್ಣ ದೇವಸ್ಥಾನ ಪರಿಸರದ ಖಾಸಗಿ ತೋಟದಲ್ಲಿ ರವಿವಾರ ಕೆಲಸಕ್ಕೆಂದು ಹೋಗಿದ್ದರು. ಅನಂತರ ಅವರು ಮನೆಗೆ ಹಿಂತಿರುಗಿರಲಿಲ್ಲ. ಆ ಬಗ್ಗೆ ಮನೆಯವರು ಕಾಸರಗೋಡು ಪೊಲೀಸರಿಗೂ ಮಾಹಿತಿ ನೀಡಿದ್ದರು.

ಈ ಮಧ್ಯೆ ವಿನಾಯಕ ಕೆಲಸ ಮಾಡುತ್ತಿದ್ದ ಹಿತ್ತಿಲಿನ ಕೆರೆ ಬಳಿ ಮನೆಯವರು ಪರಿಶೀಲಿಸಿದಾಗ ವಿನಾಯಕರ ಮೊಬೈಲ್ ಫೋನ್ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಅದರಿಂದ ಶಂಕೆಗೊಂಡು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ರ ನೇತೃತ್ವದ ಕಾಸರ ಗೋಡು ಅಗ್ನಿಶಾಮಕ ದಳ ಇಂದು ಬೆಳಿಗ್ಗೆ ಕೆರೆಯಲ್ಲಿ ಶೋಧ ನಡೆಸಿದಾಗ ವಿನಾಯಕರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೃತರು ತಾಯಿಯ ಹೊರತಾಗಿ ಸಹೋದರರಾದ ರಾಜೇಶ್ ಕೆ, ವಿಜೇತ್ ಕೆ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಅಕ್ಕ ಜ್ಯೋತಿ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page