ರಾಜ್ಯಸರಕಾರದ ಕೊನೆಯ ಮುಂಗಡಪತ್ರವೂ ನಿರಾಶಾಜನಕ- ಎಂ.ಎಲ್. ಅಶ್ವಿನಿ

ಕಾಸರಗೋಡು: ಜಿಲ್ಲೆಯ ಅಭಿವೃದ್ಧಿ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸೂಕ್ತವಾದ ಯೋಜನೆಗಳು ಹಾಗೂ ಮೊತ್ತ ಮೀಸಲಿಡದ ಪಿಣರಾಯಿ ವಿಜಯನ್‌ರ ದ್ವಿತೀಯ ಹಂತದ ಸರಕಾರದ ಕೊನೆಯ ಮುಂಗಡಪತ್ರ ನಿರಾಸೆ ಮೂಡಿಸಿರುವುದಾಗಿಯೂ ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣಿಸಿರುವುದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಗಿರುವ ರಾಜ್ಯ ಸರಕಾರದ ಬಜೆಟ್ ಪಾಲು ಜಿಲ್ಲೆಯ ಆರೋಗ್ಯವಲಯ ಹಾಗೂ ಶಿಕ್ಷಣವಲಯದಲ್ಲಿರುವ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸಾಕಾಗುವಂತದ್ದಲ್ಲ. ಕಾಸರಗೋಡು ಮೆಡಿಕಲ್ ಕಾಲೇಜಿನ ಜೊತೆಗೆ ರಾಜ್ಯದ ಇತರ ಮೂರು ಮೆಡಿಕಲ್ ಕಾಲೇಜುಗಳಿಗೂ ಸೇರಿ ಒಟ್ಟು 53 ಕೋಟಿ ರೂ. ಮೀಸಲಿಡಲಾಗಿದೆ. 40 ಶೇಕಡಾಕ್ಕಿಂತಲೂ ಹೆಚ್ಚು ನಿರ್ಮಾಣ ಬಾಕಿ ಉಳಿದಿರುವ ಮೆಡಿಕಲ್ ಕಾಲೇಜಿಗೆ ಈ ಮೀಸಲು ಮೊತ್ತ ಸಂಪೂರ್ಣ ಪರ್ಯಾಪ್ತವಲ್ಲವೆಂದು ಅವರು ನುಡಿದರು. ಜಿಲ್ಲೆಯಲ್ಲಿ ಹೊಸ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜ್ ಎಂಬ ಬೇಡಿಕೆಯನ್ನೂ ಪರಿಗಣಿಸಲಾಗಿಲ್ಲ. ಕಡಲ್ಕೊರೆತ ಬೆದರಿಕೆಯನ್ನು ತಡೆಯಲಿರುವ ಯೋಜನೆಗಳಿಗೆ ಹಣ ಮೀಸಲಿಡಲಾಗಿಲ್ಲ.

ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿತರಣೆ ಮಾಡಲಿರುವ ಮೊತ್ತ ಮಾತ್ರವೇ ಮೀಸಲಿಡಲಾಗಿದೆ. ತಜ್ಞ ಚಿಕಿತ್ಸೆಗಿರುವ ಸೌಕರ್ಯ ಏರ್ಪಡಿಸಲು ಮೊತ್ತ ಲಭ್ಯವಿಲ್ಲದ ಅವಸ್ಥೆ ಇದೆ. ಅಪಾಯಕರ ಸ್ಥಿತಿಯಲ್ಲಿರುವ ಆಸ್ಪತ್ರೆ ಕಟ್ಟಡಗಳನ್ನು ನವೀಕರಿಸಲು, ಪುನರ್ ನಿರ್ಮಿಸಲು ಅಗತ್ಯವಾದ ಮೊತ್ತ ಮುಂಗಡಪತ್ರದಲ್ಲಿ ಮೀಸಲಿಡಲಾಗಿಲ್ಲವೆಂದು ಅವರು ದೂರಿದರು. ಮಂಜೇಶ್ವರ ತಾಲೂಕು ಕಚೇರಿಗೆ ಖಾಯಂ ಕಟ್ಟಡ ನಿರ್ಮಿಸಲು ಈ ಬಾರಿಯೂ ಮೊತ್ತ ಮೀಸಲಿಡಲಿಲ್ಲ ಎಂಬುದು ಪ್ರತಿಭಟನಾರ್ಹವೆಂದ ಅವರು ಮಸಾಲೆ ಬಾಂಡ್‌ಗೆ ಸಮಾನವಾದ ಆರ್ಥಿಕ ವಂಚನೆ ನಡೆಸಲು ಬೇಕಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮುನಿಸಿಫಲ್ ಬಾಂಡ್ ಮೂಲಕ ಯೋಜನೆಗಳಿಗಿರುವ ಹಣ ಲಭ್ಯಗೊಳಿಸಲು ರಾಜ್ಯಸರಕಾರ ಒಪ್ಪಿಗೆ ನೀಡುತ್ತಿರುವುದಾಗಿಯೂ ಅಶ್ವಿನಿ ಆರೋಪಿಸಿದರು.

You cannot copy contents of this page