ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ, ಡೀಸೆಲ್ ಬೆಲೆಯೇರಿಕೆ: ನಷ್ಟದ ಹಿನ್ನೆಲೆಯಲ್ಲಿ ಸಂಚಾರ ನಿಲ್ಲಿಸಲು ಜಿ.ಫಾರ್ಮ್ ಸಲ್ಲಿಸಿದ ಜಿಲ್ಲೆಯ 10 ಖಾಸಗಿ ಬಸ್‌ಗಳು

ಕಾಸರಗೋಡು: ಪ್ರಿಯದರ್ಶಿನಿ ಯೋಜನೆಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವುದು ಹಾಗೂ ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚುತ್ತಿರುವ ಪರಿಣಾಮ ನಷ್ಟದಲ್ಲಿ ಸಾಗುತ್ತಿರುವ ಖಾಸಗಿ ಬಸ್‌ಗಳು ತಮ್ಮ ಸಂಚಾರವನ್ನು ನಿಲುಗಡೆಗೊಳಿಸಲು ಮುಂದಾಗಿವೆ.  ಇದರಂತೆ   ಸಂಚಾರ ನಿಲ್ಲಿಸಲು ಜಿಲ್ಲೆಯ 10 ಬಸ್‌ಗಳು ಆರ್‌ಟಿಒಗೆ ಜಿ ಫಾರ್ಮ್ ಅರ್ಜಿ ಸಲ್ಲಿಸಿವೆ. ತಾವು ಪಾವತಿಸಿರುವ ಮೂರು ತಿಂಗಳ ರಸ್ತೆ ತೆರಿಗೆ ಅವಧಿ ಜೂನ್ ೩೦ರಂದು ಕೊನೆಗೊಳ್ಳಲಿದ್ದು, ಅಂದಿನಿಂದ ತಮ್ಮ ಬಸ್‌ಗಳ ಸಂಚಾರ ನಿಲುಗಡೆಗೊಳಿಸಲು ಜಿ ಫಾರ್ಮ್ ಸಲ್ಲಿಸಿರುವುದಾಗಿ ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ. ಸಾರಿಗೆ ಇಲಾಖೆಯ ಕಾನೂನು ಪ್ರಕಾರ ರಸ್ತೆ ತೆರಿಗೆಯಿಂದ ಹೊರತುಪಡಿಸಲು ಖಾಸಗಿ ಬಸ್‌ಗಳ ಮಾಲಕರು ಸಲ್ಲಿಸುವ  ಒಂದು ಕ್ರಮವಾಗಿದೆ  ಜಿ ಫಾರ್ಮ್ ಸಲ್ಲಿಕೆ. ತೀವ್ರ ಆರ್ಥಿಕ ನಷ್ಟ ಹಾಗೂ ಇತರ ಕಾರಣಗಳಿಂದ ನಿಗದಿತ ಸಮಯದ ತನಕ ಬಸ್ ಸಂಚಾರ ನಿಲ್ಲಿಸಬೇಕಾಗಿ ಬಂದಲ್ಲಿ ಬಸ್ ಮಾಲಕರು ಆಯ್ದುಕೊಳ್ಳುವ ಒಂದು ಮಾರ್ಗವಾಗಿದೆ ಜಿ ಫಾರ್ಮ್ ಸಲ್ಲಿಕೆ ಕ್ರಮ.

ಪ್ರಿಯದರ್ಶಿನಿ ಉಚಿತ ಪ್ರಯಾಣ ಹಾಗೂ ಡೀಸೆಲ್ ಬೆಲೆ ಹೆಚ್ಚುತ್ತಿರುವುದರಿಂದ  ಖಾಸಗಿ ಬಸ್‌ಗಳು ತೀವ್ರ ನಷ್ಟ ಎದುರಿಸುವಂತೆ ಮಾಡಿದೆ.  ಇದರಿಂದ ಬಸ್ ಸಂಚಾರ ನಿಲುಗಡೆಗೊಳಿಸಬೇಕಾಗಿ ಬಂದಿದೆಯೆಂದು   ಮಾಲಕರು ಹೇಳುತ್ತಿದ್ದಾರೆ. 

ಜಿಲ್ಲೆಯಲ್ಲಿ ಈಗ ಒಟ್ಟು  480 ಖಾಸಗಿ ಬಸ್‌ಗಳು  ಸಂಚಾರ ನಡೆಸುತ್ತಿವೆ. ಇವುಗಳ  ಮೂರು ತಿಂಗಳ ರಸ್ತೆ ತೆರಿಗೆ ಪಾವತಿಸಲು ಜೂನ್ 30ರ ತನಕ ಸಮಯಾ ವಕಾಶವಿದೆ. ಇದರೊಳಗೆ ನಷ್ಟದಲ್ಲಿ ಸಾಗುತ್ತಿರುವ ಇನ್ನಷ್ಟು ಬಸ್‌ಗಳು ಸಂಚಾರ ನಿಲುಗಡೆಗೊಳಿಸಲು ಜಿ ಫಾರ್ಮ್ ಸಲ್ಲಿಸುವ ಸಾಧ್ಯತೆಯನ್ನು  ಅಲ್ಲಗಳೆಯುವಂತಿಲ್ಲವೆಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ.

You cannot copy contents of this page