ಕಾಸರಗೋಡು: ಕಾಸರಗೋಡು ವಿಧಾನಭಾ ಕ್ಷೇತ್ರದಲ್ಲಿ ಎಡರಂಗ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ನ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇವರ ಹೆಸರನ್ನು ಎಡರಂಗ ಇಂದು ವಿದ್ಯುಕ್ತವಾಗಿ ಪ್ರಕಟಿಸಲಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರವನ್ನು ಎಡರಂಗದ ಘಟಕ ಪಕ್ಷವಾದ ಐಎನ್ಎಲ್ಗೆ ಬಿಟ್ಟು ಕೊಟ್ಟಿದ್ದರೂ ಇಲ್ಲಿ ಐಎನ್ಎಲ್ ಸ್ಪರ್ಧಿಸದೇ ಇರಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಶಾನವಾಸ್ ಪಾದೂರುರನ್ನು ಕಣಕ್ಕಿಳಿಸಲು ಸಿಪಿಎಂ ಮುಂದಾಗಿದೆ. ಶಾನವಾಸ್ ಪಾದೂರು ಬೇವಿಂಜೆ ಸಮೀಪದ ಪಾದೂರು ನಿವಾಸಿಯಾಗಿದ್ದಾರೆ.
ಆ ಮೂಲಕ ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಎಡರಂಗ, ಐಕ್ಯರಂಗ ಮತ್ತು ಎನ್ಡಿಎ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ವರ ಸ್ಪಷ್ಟ ಚಿತ್ರಣ ಹೊರಬಂದಿದೆ.
ಇದೇ ವೇಳೆ ಎನ್ಡಿಎ ಅಭ್ಯರ್ಥಿ ಯಾದ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹಾಗೂ ಯುಡಿಎಫ್ ಅಭ್ಯರ್ಥಿ ಮುಸ್ಲಿಂ ಲೀಗ್ನ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಈಗಾಗಲೇ ಪ್ರಚಾರ ಸಕ್ರಿಯಗೊಳಿಸಿದ್ದಾರೆ. ಎಂ.ಎಲ್. ಅಶ್ವಿನಿ ನಿನ್ನೆ ವರ್ಕಾಡಿ ಮಜಿಬೈಲ್ನ ವಸತಿಯಿಂದ ಹೊರಟು ಬಳಿಕ ಎನ್ಡಿಎ ಕಾಸರಗೋಡು ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿ ಕಚೇರಿಗೆ ತಲುಪಿ ಗಣಪತಿ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಮಧೂರು ಈಸ್ಟ್, ಮಧೂರು ವೆಸ್ಟ್ ಚುನಾವಣಾ ಸಮಿತಿ ಕಚೇರಿ, ಕರಂದಕ್ಕಾಡ್ ಎನ್ಡಿಎ ಕಾಸರಗೋಡು ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿ ಕಚೇರಿಯ ಉದ್ಘಾಟನೆ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿ ಸಿದರು. ಪಕ್ಷದ ಮಾಜಿ ಜಿಲ್ಲಾ, ರಾಜ್ಯ ನೇತಾರರು ಸಹಿತ ಹಲವರು ಉಪಸ್ಥಿತರಿದ್ದರು.
ಮುಸ್ಲಿಂ ಲೀಗ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ನಿನ್ನೆ ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ, ತಳಂಗರೆ ಮಾಲಿಕ್ ದಿನಾರ್ ವಲಿಯ ಜಮಾಅತ್ ಮಸೀದಿಗೆ ತೆರಳಿ ನಮಾಜು ನಡೆಸಿದ ಬಳಿಕ ವಿವಿಧೆಡೆ ತೆರಳಿ ಪಕ್ಷದ ನೇತಾರರು ಹಾಗೂ ಕಾರ್ಯಕರ್ತರನ್ನು ಭೇಟಿಯಾ ಗಿದ್ದಾರೆ. ಮೊನ್ನೆ ಜಿಫ್ರಿ ಮುತ್ತುಕೋಯ ತಂಙಳ್, ಎಡನೀರು ಮಠಾಧೀಶಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನೆಲ್ಲಿಕುಂಜೆ ಕಡಪ್ಪುರ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಮೊದಲಾದೆಡೆಗಳಿಗೂ ಭೇಟಿ ನೀಡಿ ಕ್ಷೇತ್ರ ಪದಾಧಿಕಾರಿಗಳಿಂದ ಮತ ಯಾಚನೆ ನಡೆಸಿದ್ದಾರೆ.






