ಕುಂಬಳೆ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಶ್ರಫ್ ಪಚ್ಲಂಪಾರೆ ಅವರ ಮನೆಗೆ ಹಾನಿ ಎಸಗಿದ ಘಟನೆಗೆ ಸಂಬಂಧಿಸಿ ಮುಸ್ಲಿಂ ಲೀಗ್ ಕಾರ್ಯಕರ್ತರಾದ ಐದು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಶ್ರಫ್‌ರ ಪುತ್ರಿ ಫಾತಿಮತ್ ಸೈಲ (23) ನೀಡಿದ ದೂರಿನಂತೆ ಮಶ್ಕೂರ್, ಮಶೂಕ್, ಕೆ.ಎಸ್. ಮೂಸ, ಕೆ.ಎಸ್. ಸತ್ತಾರ್, ಮೋನಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಸಂಜೆ ತಂಡವೊಂದು ಮನೆಗೆ ಅತಿಕ್ರಮಿಸಿ ನುಗ್ಗಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ್ದು ಬಳಿಕ ಮನೆಗೆ ಕಲ್ಲು ಹಾಗೂ ಪಟಾಕಿ ಎಸೆದು ಹಾನಿಗೈದಿರುವುದಾಗಿ ದೂರಲಾಗಿದೆ. ತಂಡದ ಹಲ್ಲೆಯಿಂದ ದೂರುದಾತೆ ಹಾಗೂ ಆಕೆಯ ತಾಯಿ ಅವ್ವಾಬಿ, ಸಹೋದರಿ ಅಮೀರ ಗಾಯಗೊಂಡಿದ್ದಾರೆ.







