ಕಲ್ಲಿಕೋಟೆ: ಸಾಮಾಜಿಕ ಜಾಲತಾಣದಲ್ಲಿ ಲೈಕ್‌ಗೋಸ್ಕರ ಬಸ್ಸಿನಲ್ಲಿ ದೇಹ ಸ್ಪರ್ಶಿಸಿರುವುದಾಗಿ ಆರೋಪಿಸಿ ಕಲ್ಲಿಕೋಟೆ ನಿವಾಸಿ ದೀಪಕ್ (41)ರ ವಿರುದ್ಧ ವೀಡಿಯೋ ದೃಶ್ಯ ಪ್ರಚಾರ ಮಾಡಿದುದರಿಂದ ಮನನೊಂದು ತನ್ನ ಹುಟ್ಟುಹಬ್ಬದ ದಿನದಂದೇ ದೀಪಕ್ ನೇಣಿಗೆ ಶರಣಾದ ಘಟನೆಗೆ ಸಂಬಂಧಿಸಿ ಆ ವೀಡಿಯೋ ದೃಶ್ಯಗಳನ್ನು ಪ್ರಚಾರ ಮಾಡಿದ ವಡಗರೆಯ ಶಂಜಿತ ಮುಸ್ತಫ ಎಂಬಾಕೆಯ ವಿರುದ್ಧ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಮಾತ್ರವಲ್ಲ ಪೊಲೀಸರು ನಿನ್ನೆ ವಡಗರೆಯಲ್ಲಿರುವ ಶಂಜಿತಾಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆಕೆಯ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡಿದ್ದಾರೆ. ಆಕೆಯ ವಿರುದ್ಧ ದೀಪಕ್‌ನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೀಪಕ್ ಕಳೆದ ಶುಕ್ರವಾರ ಬಸ್ಸಿನಲ್ಲಿ ಪಯ್ಯನ್ನೂರಿಗೆ ತೆರಳುತ್ತಿದ್ದ ವೇಳೆ ಬಸ್‌ನಲ್ಲಿ ಅವರು ತನ್ನ ದೇಹಸ್ಪರ್ಶ ಮಾಡಿರುವುದಾಗಿ ಆರೋಪಿಸಿ ಶಂಜಿತ ಕಳೆದ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದಳ. ಅದನ್ನು ಕಂಡು ತೀವ್ರ ಮನನೊಂದ ದೀಪಕ್ ತನ್ನ ಹುಟ್ಟುಹಬ್ಬದಿನವಾದ ಕಳೆದ ಭಾನುವಾರ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ. ದೀಪಕ್ ಹೆತ್ತವರಿಗೆ ಏಕೈಕ ಪುತ್ರನಾಗಿದ್ದಾರೆ.







