ವರ್ಕಾಡಿ: ಆಮ್ನಿ ವ್ಯಾನ್ ತಡೆದು ನಿಲ್ಲಿಸಿ ಕೋಳಿ ವ್ಯಾಪಾರಿಯ ಕುತ್ತಿಗೆಗೆ ಕತ್ತಿ ಇರಿಸಿ ಬೆದರಿಸಿ ೩ ಲಕ್ಷ ರೂ. ಮೌಲ್ಯದ ಚಿನ್ನದ ಸರ ಅಪಹರಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿ ಸೆರೆಯಾಗಿದ್ದಾನೆ. ಕುಂಬಳೆ, ಬಂದ್ಯೋಡು, ಅಡ್ಕ ವೀರನಗರ, ಕೋಟೆ ಹೌಸ್ ನಿವಾಸಿ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (29)ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಮೊರತ್ತಣೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಅರಿಬೈಲ್ ನಿವಾಸಿ ಹಾಗೂ ಮೊರತ್ತಣೆಯಲ್ಲಿ ಮಾಂಸದ ಕೋಳಿಗಳ ಮಾರಾಟದಂಗಡಿ ಮಾಲಕನಾಗಿರುವ ಸ್ವಾನಿತ್ ಅಲಿಯಾಸ್ ಸೀತಾರಾಮ ಶೆಟ್ಟಿ (33)ನನ್ನು ಬೆದರಿಸಿ ಸರ ಅಪಹರಿಸಲಾಗಿದೆ. ಅಂಗಡಿಯಿಂದ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಮಧ್ಯೆ ಸ್ವಾನಿತ್‌ನನ್ನು ಅಡ್ಡಗಟ್ಟಿ ಕತ್ತಿ ತೋರಿಸಿ ಬೆದರಿಸಿ ಸರ ಅಪಹರಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ವ್ಯಾನನ್ನು ಅಡ್ಡಗಟ್ಟಿ ಅಪಹರಣ ನಡೆಸಿದ್ದಾರೆ. ಬಳಿಕ ಇವರು ಅಪರಿಮಿತ ವೇಗದಿಂದ ಹೆದ್ದಾರಿಯತ್ತ ಸಂಚರಿಸಿದ್ದಾರೆಂದು ಸ್ವಾನಿತ್ ತಿಳಿಸಿದ್ದಾರೆ.
ಘಟನೆಯಲ್ಲಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ಪ್ರಧಾನ ಆರೋಪಿಯಾದ ತೋಕ್ ಲತೀಫ್‌ನನ್ನು ಗಂಟೆಗಳ ವ್ಯತ್ಯಾಸದಲ್ಲಿ ಸೆರೆ ಹಿಡಿಯಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಹಲವಾರು ಪ್ರಕರಣಗಳು ಈತನ ವಿರುದ್ಧವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಇನ್ನೊಂದು ಕೇಸಿನಲ್ಲಿ ಸೆರೆಯಾಗಿ ಮಂಗಳೂರು ಜೈಲ್‌ನಲ್ಲಿದ್ದ ಈತ ನಾಲ್ಕು ದಿನದ ಹಿಂದೆ ಜಾಮೀನಿನಲ್ಲಿ ಹೊರ ಬಂದಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಈತ ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ.