ಕುಂಬಳೆ: ಸಹೋದರನಿಗೆ ಲಭಿಸುವ ಆಹಾರ ತರಲು ಅಂಗನವಾಡಿಗೆ ಹೋಗುತ್ತಿದ್ದ ಏಳರ ಹರೆಯದ ಬಾಲಕನನ್ನು ಕಾರಿನಲ್ಲಿ ತಲುಪಿದ ತಂಡ ಅಪಹರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿಯವರ ನಿರ್ದೇಶ ಪ್ರಕಾರ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭಾಸ್ಕರನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕರ್ನಾಟಕದ ಹುಬ್ಬಳ್ಳಿ ನಿವಾಸಿಯಾದ ಬಾಲಕನ ತಾಯಿ ನೀಡಿದ ದೂರಿನ ಪ್ರಕಾರ ಕೇಸು ದಾಖಲಿಸಲಾಗಿದೆ. ಕಳೆದ ಶುಕ್ರವಾರ ಮಧ್ಯಾಹ್ನ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ತಂದೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕ್ವಾರ್ಟರ್ಸ್‌ನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳಿದ್ದರು. ತಮ್ಮನಿಗೆ ಉಚಿತವಾಗಿ ಲಭಿಸುವ ಆಹಾರ ತರಲೆಂದು ಏಳರ ಹರೆಯದ ಪುತ್ರನನ್ನು ತಾಯಿ ಸಮೀಪದ ಅಂಗನವಾಡಿಗೆ ಕಳುಹಿಸಿದ್ದರು. ಆಹಾರ ಪಡೆದು ಕ್ವಾರ್ಟರ್ಸ್‌ಗೆ ಮರಳಿ ಬರುತ್ತಿದ್ದಾಗ ಕಾರಿನಲ್ಲಿ ತಲುಪಿದ ಇಬ್ಬರು ಬಾಲಕನನ್ನು ಅಪಹರಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ಕಾರಿನಲ್ಲಿದ್ದ ಇಬ್ಬರೂ ಮಾಸ್ಕ್ ಧರಿಸಿದ್ದರು. ಈ ವೇಳೆ ಅಲ್ಲಿಂದ ಓಡಿ ಪರಾರಿಯಾದ ಬಾಲಕ ಕ್ವಾರ್ಟರ್ಸ್‌ಗೆ ತಲುಪಿದ್ದರೂ ಘಟನೆ ಬಗ್ಗೆ ತಾಯಿ ಯೊಂದಿಗೆ ತಿಳಿಸಿರಲಿಲ್ಲ. ಅಲ್ಲದೆ ಬಾಲಕ ಕೊಠಡಿಯಿಂದ ಹೊರಗಿಳಿಯಲೋ, ಯಾರೊಂದಿಗೆ ಮಾತನಾಡಲೋ ಮುಂದಾಗಿಲ್ಲ. ಸಂಜೆ ತಂದೆ ತಲುಪಿ ಬಾಲಕನನ್ನು ವಿಚಾರಿಸಿದಾಗಲೇ ವಿಷಯವನ್ನು ಆತ ತಿಳಿಸಿದ್ದಾನೆ. ಅನಂತರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕನ ಅಪಹರಣ ಯತ್ನದ ಬಗ್ಗೆ ‘ಕಾರವಲ್’ ವರದಿ ಪ್ರಕಟಿಸಿದಾಗಲೇ ಘಟನೆ ಊರಿನವರಿಗೆ ತಿಳಿದುಬಂದಿದೆ. ವರದಿ ಎಡಿಜಿಪಿಯ ಗಮನಕ್ಕೂ ಬಂದಿದ್ದು,ಘಟನೆ ಬಗ್ಗೆ ಕೂಡಲೇ ಕೇಸು ದಾಖಲಿಸಿ, ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗೆ ನಿರ್ದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಎಸ್‌ಪಿ ಅಚ್ಯುತ್ ಅಶೋಕ್‌ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದರು. ಎಸ್‌ಐ ಪಿ.ವಿ. ಮನು ಹಾಗೂ ತಂಡ ಬಾಲಕನಿಂದ ಹಾಗೂ ತಾಯಿಯಿಂದ ಮಾಹಿತಿ ಸಂಗ್ರಹಿಸಿದ್ದರು. ಘಟನೆ ನಡೆದ ಸ್ಥಳದ ಸಮೀಪದ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ಪೈಕಿ ಒಂದು ಕ್ಯಾಮರಾದ ದೃಶ್ಯದಿಂದ ಬಾಲಕ ತಿಳಿಸಿದ ರೀತಿಯಲ್ಲಿರುವ ಒಂದು ಕಾರಿನ ದೃಶ್ಯ ಪತ್ತೆಯಾಗಿದೆ. ಈ ದೃಶ್ಯವನ್ನು ಪೊಲೀಸರು ಪರಿಶೀಲಿಸುತ್ತಿ ದ್ದಾರೆ. ಕುಂಬಳೆಯಿಂದ ನಾಯ್ಕಾಪುವ ರೆಗಿನ ವಿವಿಧೆಡೆಗಳಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದೆ. ಕಾರಿನಲ್ಲಿ ತಲುಪಿದ ತಂಡವನ್ನು ಶೀಘ್ರ ಪತ್ತೆಹಚ್ಚಲು ಸಾಧ್ಯವಿದೆಯೆಂಬ ನಿರೀಕ್ಷೆ ಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.






