ಜೀವ ತೆಗೆಯುವುದನ್ನು ತಡೆದ ಮಕ್ಕಳಿಗೆ ಹಣ್ಣು ನೀಡಿ ಪ್ರತ್ಯುಪಕಾರ: ಪಯಸ್ವಿನಿ ಮಾವಿನ ಮರ ಫಲವಿತ್ತ ಸಂಭ್ರಮ

ಕಾಸರಗೋಡು: ಹೊಸವರ್ಷದ ಹೊಸ ದಿನಗಳಲ್ಲಿ ನಿರೀಕ್ಷೆಯ ಹೊಸ ಕಿರಣಗಳೊಂದಿಗೆ ಮಾವಿನ ಮರ ಹೂಬಿಟ್ಟಿದೆ. ಪ್ರಕೃತಿಪ್ರೇಮಿಗಳು ಮಧ್ಯಪ್ರವೇಶಿಸಿ ಪುನರ್ಜನ್ಮ ನೀಡಿದ ಪಯಸ್ವಿನಿ ಮಾವಿನಮರ ಫಲ ಬಿಟ್ಟಿದೆ. ಮರ ತುಂಬ ಹೂಗಳಿದ್ದು ಕಾಯಿ ಕಂಡು ಬರುತ್ತಿದೆ. ೨೦೨೨ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯಂ ಗವಾಗಿ ಹೊಸ ಬಸ್ ನಿಲ್ದಾಣ ಬಳಿಯ ರಸ್ತೆ ಬದಿಯಿಂದ   ಅಡ್ಕತ್ತಬೈಲು ಸರಕಾರಿ ಯುಪಿ ಶಾಲೆಯ ಮೈದಾನಕ್ಕೆ ಸ್ಥಳಾಂತರಿಸಿದ ಮಾವಿನ ಮರದಲ್ಲಿ ಈ ವರ್ಷ ಪ್ರಥಮವಾಗಿ ಮಾವಿನಕಾಯಿ ಕಂಡು ಬಂದಿದೆ.

ಕಾಸರಗೋಡು ನಗರ ಹೃದಯ ದಲ್ಲಿ ಕವಯಿತ್ರಿ ಸುಗತಕುಮಾರಿ ೨೦೦೬ರಲ್ಲಿ ನೆಟ್ಟ ಪಯಸ್ವಿನಿ ಎಂಬ ಮಾವಿನ ಹಣ್ಣಿನ ಸಸಿ ಬೆಳೆದು ದೊಡ್ಡದಾದಾಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಮುರಿದು ತೆಗೆಯಲು ತೀರ್ಮಾನಿಸಲಾಗಿತ್ತು. ಇದನ್ನು ವಿರೋಧಿಸಿ ಅಡ್ಕತ್ತಬೈಲು ಶಾಲೆಯ ವಿದ್ಯಾರ್ಥಿಗಳು ರಂಗಕ್ಕಿಳಿದಿದ್ದರು. ಇದು ಅಧಿಕಾರಿಗಳ ಗಮನಕ್ಕೆ ಬಂದಾಗ ಸುದ್ಧಿಮಾಧ್ಯಮಗಳು ವರದಿ ನೀಡಿತ್ತು. ಆ ಬಳಿಕ ವಿದ್ಯಾರ್ಥಿಗಳು, ಶಾಲಾ ಅಧಿಕಾರಿಗಳು, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯೀಕರಣ ವಿಭಾಗ, ಪೊಲೀಸರು, ಕಾಸರಗೋಡು ಪೀಪಲ್ಸ್ ಫಾರಂ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದ ಊರಾಲುಂಗಲ್ ಸೊಸೈಟಿ ಜಂಟಿಯಾಗಿ ಮರದ ರಕ್ಷಣೆಗೆ ನಿಂತಿತು. ಈ ಹಿನ್ನೆಲೆಯಲ್ಲಿ ೨೦೨೨ ಜೂನ್ ೧೫ರಂದು ಮಾವಿನ ಮರವನ್ನು ಅಡ್ಕತ್ತಬೈಲ್ ಶಾಲಾ ಮೈದಾನಕ್ಕೆ ಸ್ಥಳಾಂತರಿಸಿ ನೆಡಲಾಯಿತು. ಈ ಮರದ ಅಡಿಯಲ್ಲಿ ಪ್ರತೀ ವರ್ಷ ಜೂನ್ ತಿಂಗಳಲ್ಲಿ ಪ್ರಕೃತಿಪ್ರೇಮಿಗಳು ಮರ ನೆಟ್ಟ ದಿನದ ಆಚರಣೆ ನಡೆಸುತ್ತಿದ್ದಾರೆ.

You cannot copy contents of this page