ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದು ವಿಜಯೋತ್ಸವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಮಕ್ಕಳು ಗಾಯಗೊಂಡ ಘಟನೆಗೆ ಸಂಬಂಧಿಸಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಸೇರಿ ಒಟ್ಟು ೫೧ ಮಂದಿಯ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ನಗರಸಭೆಯ ಕೋಟೆ ರಸ್ತೆ ವಾರ್ಡ್‌ನಲ್ಲಿ ಯುಡಿಎಫ್‌ನ ಜಾಫರ್ ಕಮಾಲ್ ಗೆಲುವುಸಾಧಿಸಿದ್ದು ಫಲಿತಾಂಶ ಪ್ರಕಟಗೊಂಡ ಬಳಿಕ ಯುಡಿಎಫ್ ಕಾರ್ಯಕರ್ತರು ಜಾಫರ್ ಕಮಾಲ್‌ನೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿ ಗೆಲುವಿನ ಸಂಭ್ರಮ ಆಚರಿಸಿದ್ದರು. ಆ ವೇಳೆ ಲಾಹಿಕ್ (10) ಮತ್ತು ಅಬೂಬಕರ್ ಸಿದ್ದಿಕ್ (14) ಎಂಬಿಬ್ಬರು ಮಕ್ಕಳು ಗಾಯಗೊಂಡಿದ್ದು ಅದಕ್ಕೆ ಸಂಬಂಧಿಸಿ ಭಾರತೀಯ ನ್ಯಾಯಸಂಹಿತೆಯ 189 (2), 189 (3),191(2),285, 288 ಮತ್ತು 190 ಎಂಬೀ ಸೆಕ್ಷನ್‌ಗಳ ಪ್ರಕಾರ ಗೆದ್ದ ಅಭ್ಯರ್ಥಿ ಜಾಫರ್ ಕಮಾಲ್ ಸೇರಿದಂತೆ ಒಟ್ಟು 51 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಗೆ ಭಂಗ ತರುವ ರೀತಿಯಲ್ಲಿ ಕಾನೂನು ಬಾಹಿರವಾಗಿ ಜಮಾಯಿಸಿ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಹಾಗೂ ಅಜಾಗ್ರತೆಯಿಂದ ಉಗ್ರ ಸದ್ದು ಉಂಟುಮಾಡುವ ಪಟಾಕಿಗಳನ್ನು ಸಿಡಿಸಿದ ಪರಿಣಾಮ ಮಕ್ಕಳು ಗಾಯಗೊಂಡ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.







