ಚುನಾವಣೆ ವೇಳೆ ಹಲವೆಡೆಗಳಲ್ಲಿ ಘರ್ಷಣೆ: ಮಂಗಲ್ಪಾಡಿಯಲ್ಲಿ ಬೂತ್ ಏಜೆಂಟ್‌ಗಳ ಮಧ್ಯೆ ವಿವಾದ; ಹೊಡೆದಾಟ ತಡೆದ ಪೊಲೀಸ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿನ್ನೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೆಲವೆಡೆಗಳಲ್ಲಿ ಸಣ್ಣಪುಟ್ಟ ಘರ್ಷಣೆ ಉಂಟಾಗಿದೆ.

ಮಂಗಲ್ಪಾಡಿ ಪಂಚಾಯತ್‌ನ ಎರಡನೇ ವಾರ್ಡ್‌ನ ಮತಗಟ್ಟೆಯೊಳಗೆ ಹಾಗೂ ಹೊರಗೆ ಎರಡು ತಂಡಗಳ ಮಧ್ಯೆ ನಿನ್ನೆ ಘರ್ಷಣೆ ಹುಟ್ಟಿಕೊಂಡಿದ್ದು ಪೊಲೀಸರು ತಕ್ಷಣ ನಡೆಸಿದ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

ಎರಡನೇ ವಾರ್ಡ್‌ನ ಎರಡನೇ ಮತಗಟ್ಟೆಯಲ್ಲಿ ಸಂಜೆ ೫.೩೦ರ ವೇಳ ಮತ ಚಲಾಯಿಸಲು ಬಂದ  ಓರ್ವ ಮತದಾರನ ಹೆಸರಿಗೆ ಸಂಬಂಧಿಸಿ ಮುಸ್ಲಿಂ ಲೀಗ್ ಹಾಗೂ ಎಡರಂಗದ ಸ್ವತಂತ್ರ ಅಭ್ಯರ್ಥಿಯ ಮತ ಏಜೆಂಟ್‌ಗಳ ಮಧ್ಯೆ ವಾಗ್ವಾದ ಉಂಟಾಗಿದೆ. ವಾಗ್ವಾದ ತೀವ್ರಗೊಂಡು ಅದು ಹೊಡೆದಾಟಕ್ಕೆ ತಲುಪಿದ್ದು, ಈ ವೇಳೆ ಅವರನ್ನು ಮತಗಟ್ಟೆಯಲ್ಲಿದ್ದವರು ಹೊರಗೆ  ಕಳುಹಿಸಿದರು. ಈ ವೇಳೆ ಮತಗಟ್ಟೆಯಲ್ಲಿ  ಘರ್ಷಣೆಯ  ವಾತಾವರಣ ಸೃಷ್ಟಿಯಾಯಿತು.  ಈ ವೇಳೆ ತಲುಪಿದ ಹೆಚ್ಚಿನ ಸಂಖ್ಯೆಯ ಪೊಲೀಸರು ಘರ್ಷಣೆ ನಿರತರನ್ನು ಚದುರಿಸಿ ಓಡಿಸಿದರು.

ಪಿಲಿಕೋಡ್ ಪಂಚಾಯತ್‌ನ 13 ನೇ ಮತಗಟ್ಟೆಯಲ್ಲಿ ನಿನ್ನೆ ಸಂಜೆ ವ್ಯಕ್ತಿಯೋರ್ವರು ನಕಲಿ ಮತ ಚಲಾಯಿಸುವ ಯತ್ನವನ್ನು ಯುಡಿಎಫ್ ಬೂತ್ ಏಜೆಂಟ್ ತಡೆಯಲೆತ್ನಿಸಿದಾಗ  ಅಲ್ಲಿ ಸಿಪಿಎಂ ಕಾರ್ಯಕರ್ತರು ಜಮಾಯಿಸಿದ್ದು ಅದು ಘರ್ಷಣೆಗೆ ದಾರಿಮಾಡಿಕೊಟ್ಟಿತು. ಇದರಲ್ಲಿ ಮುಸ್ಲಿಂ ಲೀಗ್ ತೃಕರಿಪುರ ಮಂಡಲ ಕಾರ್ಯದರ್ಶಿ ನಿಶಾಂ ಪಟೇಲ್, ಎಂ.ಜಿ. ಶಂಸುದ್ದೀನ್ ಮತ್ತು ನವನೀತ್ ಎಂಬವರು ಗಾಯಗೊಂಡಿದ್ದು ಅವರನ್ನು ನಂತರ ಆಸ್ಪತ್ರೆಯಲ್ಲಿ  ದಾಖಲಿಸಲಾಯಿತು.

 ಪಿಲಿಕೋಡ್ ಪಂಚಾಯತ್‌ನ 14ನೇ ಬೂತ್ ಆಗಿರುವ ಚಂದೇರ ಸರಕಾರಿ ಯುಪಿ ಶಾಲೆಯಲ್ಲಿ  ಹೊರಗೆ ಬೆಂಚ್‌ನಲ್ಲಿ ಕುಳಿತಿದ್ದ ಯುಡಿಎಫ್ ಅಭ್ಯರ್ಥಿ ರಾಘವನ್  ಕುಳಂಗರ ಅವರ ಮೇಲೆ ಒಂದು ತಂಡ  ತುರಿಸುವ ಪೌಡರ್ ಸಿಂಪಡಿಸಿದ್ದು ಅದನ್ನು  ಕಂಡ ಪೊಲೀಸರು ಅಕ್ರಮಿಗಳನ್ನು ಸೆರೆಹಿಡಿಯಲೆತ್ನಿಸಿದರು ಅದು ಸಾಧ್ಯವಾಗಲಿಲ್ಲ. ಇದರ ಹೊರತಾಗಿ ಇದೇ ಪಂಚಾಯತ್‌ನ ಎgಡನೇ ಬೂತ್ ಆಗಿರುವ ಪಿಲಿಕೋಡ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಯುಡಿಎಫ್ ಉಮೇದ್ವಾರೆ ಎ. ಶಾಂತ, ಬೂತ್ ಏಜೆಂಟ್ ಕೆ. ರಿಜೇಶ್‌ರದೇಹದ ಮೇಲೂ ಕೆಲವರು ತುರಿಸುವ  ಪೌಡರ್ ಸಿಂಪಡಿಸಿದ್ದು ಅದರಿಂದಾಗಿ ಅವರಿಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ಸಂಜೆ ಮತದಾನ ಕಳೆದ ಬಳಿಕ  ಪಳ್ಳಿಕಂಡಂ ಚೆಕೋತ್‌ನಲ್ಲಿ ಸಿಪಿಎಂ ಮತ್ತು ಲೀಗ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದಾರೆ. ಆ ವೇಳೆ  ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ವಿಗ್ನಾವಸ್ಥೆಯನ್ನು ನಿಯಂತ್ರಿಸಿದರು. ಇದರ ಹೊರತಾಗಿ ನೀಲೇಶ್ವರ ನಗರಸಭಾ 28 ಮತ್ತು 29ನೇ  ವಾರ್ಡ್‌ಗಳ ಮತಗಟ್ಟೆಗಳಲ್ಲಿ ಮುಸ್ಲಿಂ ಲೀಗ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ಮಧ್ಯೆ  ಹೊಕೈ ನಡೆಯಿತು. ಅದನ್ನು ಕಂಡ ಪೊಲೀಸರು ಲಾಠಿ ಬೀಸಿ ಎಲ್ಲರನ್ನು ಚದುರಿಸಿದರು.

ಇದೇ ರೀತಿ ದೇಲಂಪಾಡಿ ಪಂಚಾಯತ್‌ನ ೮ನೇ ವಾರ್ಡ್ ತಮರಡ್ಕದಲ್ಲಿ ಎನ್‌ಡಿಎ ಉಮೇದ್ವಾರನ ಮೇಲೆ ಸಿಪಿಎಂನ ಒಂದು ತಂಡ ಕೈ ಮಾಡಲೆತ್ನಿಸಿದ  ಘಟನೆ ನಡೆದಿದೆಯೆಂಬ ದೂರು ಕೂಡಾ ಉಂಟಾಗಿದೆ. ವಲಿಯಪರಂಬದ 4ನೇ ವಾರ್ಡ್‌ನಲ್ಲಿ ಯುಡಿಎಫ್ ಏಜೆಂಟ್ ಕೆ. ಮೊಹಮ್ಮದ್ (30)ರ ಮೇಲೆ ಬೂತ್‌ನ ಹೊರಗಡೆ ಹಲ್ಲೆ ನಡೆಸಿದ ದೂರು ಕೂಡಾ ಉಂಟಾಗಿದೆ. ಅವರನ್ನು ತೃಕರಿಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಿಪಿಎಂ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಗಾಯಾಳು ಆರೋಪಿಸಿದ್ದಾರೆ. ತೃಕರಿಪುರ ಪಂಚಾಯತ್‌ನ 6ನೇ ವಾರ್ಡ್‌ನ ಪಕ್ಷೇತರ ಉಮೇದ್ವಾರ ಪಿ. ರಮೇಶ್ ಮತ್ತು ಬೂತ್ ಏಜೆಂಟ್ ರಮೇಶ್‌ರ ಮೇಲೆ ಒಂದು ತಂಡ ಹಲ್ಲೆ ನಡೆಸಿದೆ ಯೆಂಬ ದೂರು ಕೂಡಾ ಉಂಟಾಗಿದೆ

RELATED NEWS

You cannot copy contents of this page