ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ಅಡುಗೆ ಅನಿಲ ಬೆಲೆ ಹೆಚ್ಚಳ

ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಶಮನಗೊಳ್ಳದೆ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಭಾರತಕ್ಕೂ ಅದರ ಬಿಸಿ ತಟ್ಟಿದ್ದು, ಇದರ ಪರಿಣಾಮ ಅಡುಗೆ ಅನಿಲ ಬೆಲೆ ಇಂದು ಬೆಳಿಗ್ಗಿನಿಂದ ಗಗನಕ್ಕೇರಿದೆ.

 ಮಧ್ಯಪ್ರಾಚ್ಯ ಯುದ್ದದ ಪರಿಸ್ಥಿತಿಯೇ ಬೆಲೆಯೇರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ತಲಾ 60 ರೂ.ನಂತೆ  ಇಂದಿನಿಂದ ಹೆಚ್ಚಿಸಲಾಗಿದೆ. ಇದರಿಂದಾಗಿ 14 ಕೆಜಿ ಸಿಲಿಂಡರೊಂದರ ಬೆಲೆ ಈಗ 915 ರೂ.ಗೇರಿದೆ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳ ತರಲಾಗಿದೆ. ಇದರಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ  ತಲಾ 115 ರೂ.ನಂತೆ ಹೆಚ್ಚಿಸಲಾಗಿದೆ. ಇದರಿಂದಾಗಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ ೧೮೮೩ರೂ. ಮತ್ತು  ಮುಂಬೈಯಲ್ಲಿ 1835 ರೂ.ಗೆ ತಲುಪಿದೆ. ಮಾತ್ರವಲ್ಲ ಇತರ ಎಲ್ಲಾ ರಾಜ್ಯಗಳಲ್ಲೂ ಈ ಬೆಲೆಯೇರಿಕೆ ಉಂಟಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಣಾಮ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಇಂಧನ ಮಾರುಕಟ್ಟೆ ಮೇಲೆ ಪರಿಣಾಮ ಬೀರತೊಡಗಿದೆ. ಇದರಿಂದಾಗಿ ಪರಿಸ್ಥಿತಿಯ್ನು ಕೇಂದ್ರ ಸರಕಾರ  ಅತೀ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದರಂತೆ ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್‌ಪಿಜಿ ಸಂಸ್ಕರಣಾ ಘಟಕಗಳು ಉತ್ಪಾದನೆ ಹೆಚ್ಚಿಸುವಂತೆ ಕೇಂದ್ರ ಸರಕಾರ ಈಗಾಗಲೇ ನಿರ್ದೇಶನೀಡಿದೆ. ಆ ಮೂಲಕ ದೇಶದಲ್ಲಿ ಅನಿಲ ಪೂರೈಕೆ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಇದ್ದರೂ ಭಾರತದಲ್ಲಿ ಇಂಧನ ಕೊರತೆ ಉಂಟಾಗದು ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ದೇಶದಲ್ಲಿ ಕಚ್ಛಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಸಾಕಷ್ಟು ಇಂಧನ ದಾಸ್ತಾನು ಲಭ್ಯವಿದೆಯಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ  ಪ್ರತೀ ತಿಂಗಳ ಒಂದನೇ ತಾರೀಕಿನಂದು ಎಲ್‌ಪಿಜಿ ಸಿಲಿಂಡರ್‌ಗಳ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ದರಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಅದರಂತೆ ಮಾರ್ಚ್ 1ರಂದು ವಾಣಿಜ್ಯ  ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 110 ರೂ.ನಂತೆ ಹೆಚ್ಚಿಸಲಾಗಿತ್ತು. ಅದರ ಬೆನ್ನಲ್ಲೇ ಈಗ ಬೆಲೆಯಲ್ಲಿಮತ್ತೆ ಈ ಹೆಚ್ಚಳ ತರಲಾಗಿದೆ. ಇದು ಜನಸಾಮಾನ್ಯರ ಜೀವನದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರತೊಡಗಿದೆ.

RELATED NEWS

You cannot copy contents of this page