ಮನೆಗೆ ನುಗ್ಗಿ ದಂಪತಿಯನ್ನು ಇರಿದು ಕೊಲೆ: ಸಂಬಂಧಿಕ ಕಸ್ಟಡಿಯಲ್ಲಿ

ಪಾಲಕ್ಕಾಡ್: ಒಟ್ಟಪ್ಪಾಲಂ ತೋಟಕ್ಕರದಲ್ಲಿ ಅವಳಿಕೊಲೆ ನಡೆದಿದೆ. ದಂಪತಿಯನ್ನು ಮನೆಯೊಳಗೆ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತೋಟಕ್ಕರ ನಾಲಗತ್ ನಸೀರ್ (63), ಪತ್ನಿ ಸುಹರಾ (60) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ಸಾಕು ಪುತ್ರಿಯಾದ ಸುಲ್ಫಿಯತ್‌ಳ ೪ ವರ್ಷದ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ನಿನ್ನೆ ರಾತ್ರಿ 12 ಗಂಟೆಗೆ ನಾಡನ್ನೇ ನಡುಗಿಸಿದ ಘಟನೆ ಸಂಭವಿಸಿದೆ. ಯುವತಿ ೪ ವರ್ಷದ ಮಗುವನ್ನು ಕರೆದುಕೊಂಡು ಮನೆಯಿಂದ ಹೊರಗೆ ಓಡಿದಾಗ ಸ್ಥಳೀಯರು ಈ ಬಗ್ಗೆ ತಿಳಿದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿದಾಗ ಮನೆಯಿಂದ ಸುಲ್ಫಿಯತ್‌ಳ ಪತಿ ಪೊನ್ನಾಣಿ ನಿವಾಸಿ ಮುಹಮ್ಮದ್ ರಾಫಿ ಓಡಿ ಹೋಗಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಇಂದು ಮುಂಜಾನೆ 4 ಗಂಟೆ ವೇಳೆ ಈತನನ್ನು ಸೆರೆ ಹಿಡಿಯಲಾಗಿದೆ. ಗಾಯಗೊಂಡ ಮಗುವನ್ನು ಒಟ್ಟಪಾಲಂ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊಲೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಸೆರೆಯಾದ ಯುವಕನನ್ನು ಪ್ರಶ್ನಿಸಲಾಗುತ್ತಿದೆ.

You cannot copy contents of this page