ಹುಚ್ಚುನಾಯಿ ಕಚ್ಚಿ ಹಸು ಸಾವು: ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆ; ನಾಡಿನಲ್ಲಿ ಶೋಕಸಾಗರ

ಬೋವಿಕ್ಕಾನ: ಹುಚ್ಚುನಾಯಿ ಕಡಿತಕ್ಕೊಳಗಾಗಿ ದನ ಸಾವನ್ನಪ್ಪಿರು ವುದರಿಂದ ಮನನೊಂದ ರೈತ ವಿಷ ಪ್ರಾಶನಗೈದು ಆತ್ಮಹತ್ಯೆಗೈದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮುಳಿಯಾರು ಪಾಣೂರು ಬಾಲನಡ್ಕದ ನಾರಾಯಣನ್ (80) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮೊನ್ನೆ ಬೆಳಿಗ್ಗೆ  ಹಿತ್ತಿಲಲ್ಲಿ ಗಂಭೀರಾ ವಸ್ಥೆಯಲ್ಲಿ ಕಂಡುಬಂದಿದ್ದು ಅವರನ್ನು ಮನೆಯವರು ತಕ್ಷಣ ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಭತ್ತ, ಕಂಗು ಹಾಗೂ ಹೈನುಗಾರಿಕಾ ಕೃಷಿಕರಾಗಿರುವ ನಾರಾಯಣನ್‌ರ ಎರಡು ವರ್ಷ ಪ್ರಾಯದ ಹಸುವನ್ನು ಡಿಸೆಂಬರ್ 31ರಂದು ಹಿತ್ತಿಲಲ್ಲಿ ಕಟ್ಟಿಹಾಕಲಾ ಗಿತ್ತು.  ಈ ವೇಳೆ ಹುಚ್ಚು ನಾಯಿಯೊಂದು ಅದಕ್ಕೆ ಕಚ್ಚಿತ್ತು. ಅದನ್ನು ತಿಳಿದ ಮನೆಯವರು ದನಕ್ಕೆ ರೋಗಪ್ರತಿರೋಧಕ ಚುಚ್ಚುಮದ್ದು ನೀಡಿದ್ದರು.  ದನಕ್ಕೆ ಕಚ್ಚಿದ ನಾಯಿ ಎರಡುದಿನಗಳ ನಂತರ ಅಲ್ಲೇ ಪಕ್ಕದ ಹಿತ್ತಿಲಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಾದನಂತರ ಈ ತಿಂಗಳ 18ರಂದು ದನವೂ ಸಾವನ್ನಪ್ಪಿತು. ಇದರಿಂದ ತೀವ್ರ ಮನನೊಂದು ನಾರಾಯಣನ್ ವಿಷ ಸೇವಿಸಿದ್ದರೆಂದು ಹೇಳಲಾಗುತ್ತಿದೆ.

ಕ್ಯಾಂಪ್ಕೋದ ವಿದ್ಯಾನಗರ ಶಾಖೆಯಲ್ಲಿ ಈ ಹಿಂದೆ ದೀರ್ಘಕಾಲ ಕಾರ್ಮಿಕರಾಗಿ ನಾರಾಯಣನ್  ಸೇವೆ ಸಲ್ಲಿಸಿದ್ದರು.  ಇವರು ಪತ್ನಿ  ಪದ್ಮಾವತಿ,  ಮಕ್ಕಳಾದ ವಿನೋದ್, ವಿಜು, ಬಿಂದು ಸೊಸೆಯಂದಿರಾದ ಸುಚಿತ್ರಾ, ರಜಿತಾ, ಅಳಿಯ ಕೃಷ್ಣನ್, ಸಹೋದರ ಕೊಟ್ಟನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

You cannot copy contents of this page