ಕೊಚ್ಚಿ: ಕೊಚ್ಚಿಯ ಪಚ್ಚಾಳ ಎಂಬಲ್ಲಿನ ರೈಲು ಹಳಿಯಲ್ಲಿ ಅರೆಯುವ ಕಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಇಂದು ಮುಂಜಾನೆ ೪.೩೦ರ ವೇಳೆ ಮೈಸೂರು- ತಿರುವನಂತಪುರ ಕೊಚ್ಚುವೇಳಿ ಎಕ್ಸ್‌ಪ್ರೆಸ್ ರೈಲು ಸಂಚರಿಸಿದ ಬಳಿಕ ಅರೆಯುವ ಕಲ್ಲು ಹಳಿಯಲ್ಲಿ ಕಂಡು ಬಂದಿದೆ. ಹಳಿಯ ಮಧ್ಯದಲ್ಲಿ ಕಲ್ಲು ಇರಿಸಲಾಗಿದೆ. ಕಲ್ಲು ಹೆಚ್ಚು ಎತ್ತರವಿಲ್ಲದಿರುವುದರಿಂದ ರೈಲು ಅದರ ಮೇಲೆ ಹಾದು ಹೋಗಿದೆ. ಇದೇ ರೈಲಿನ ಲೋಕೋ ಪೈಲೆಟ್ ಈ ಮಾಹಿತಿಯನ್ನು ರೈಲ್ವೇ ಪೊಲೀಸರಿಗೆ ನೀಡಿದ್ದರು.
ಹಳಿಯ ಬದಿಯಲ್ಲಿ ಕಲ್ಲು ಇರಿಸಿರುತ್ತಿದ್ದರೆ ಭಾರೀ ದೊಡ್ಡ ದುರ್ಘಟನೆ ಸಂಭವಿಸುವ ಸಾಧ್ಯತೆ ಇತ್ತು. ಹಳಿಯ ಮಧ್ಯದಲ್ಲಿ ಹೆಚ್ಚು ಭಾರವುಳ್ಳ ಕಲ್ಲನ್ನು ಇರಿಸಿರುವುದರಲ್ಲಿ ಭಾರೀ ನಿಗೂಢತೆ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ನೋರ್ತ್ ರೈಲ್ವೇ ನಿಲ್ದಾಣ ಸಮೀಪದ ಪಚ್ಚಳಂ ರೈಲ್ವೇ ಗೇಟ್ ಸಮೀಪ ಕಲ್ಲು ಪತ್ತೆಯಾಗಿದೆ. ಇದರ ಸಮೀಪದಲ್ಲೇ ನಾಯಿಯೊಂದು ಸಾವಿಗೀಡಾದ ಸ್ಥಿತಿಯಲ್ಲಿದೆ. ರೈಲು ಢಿಕ್ಕಿ ಹೊಡೆದು ನಾಯಿ ಸತ್ತಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.







