ಕುಂಬಳೆ ಪಂಚಾಯತ್‌ನಿಂದ ಶಿರಿಯ ಹೊಳೆಯ ಹೊಯ್ಗೆ ವ್ಯಾಪಾರಕ್ಕೆ ಕಡಿವಾಣ: ಹೊಯ್ಗೆ ಸಂಗ್ರಹಕ್ಕೆ ಹೈಕೋರ್ಟ್‌ನಿಂದ ತಡೆ

ಕೊಚ್ಚಿ: ಕುಂಬಳೆ ಗ್ರಾಮ ಪಂಚಾಯತ್‌ನ ಆರಿಕ್ಕಾಡಿ, ಶಿರಿಯ ಹೊಳೆಗಳ ಸಂಗಮ ಸ್ಥಾನವಾದ ಅಳಿವೆ ಬಾಗಿಲಿನಿಂದ ಹೊಯ್ಗೆ ಸಂಗ್ರಹಿಸುವು ದನ್ನು ಹೈಕೋರ್ಟ್ ತಡೆಯೊಡ್ಡಿದೆ. 9 ವರ್ಷಗಳಿಂದ ಇಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಹೊಯ್ಗೆ ವ್ಯಾಪಾರದಲ್ಲಿ ಸುಮಾರು 15 ಕೋಟಿ ರೂಪಾಯಿ ಗಳನ್ನು ಪಂಚಾಯತ್ ದಂಡವಾಗಿ ಪಾವತಿಸಬೇಕಾಗಿ ಬರಲಿದೆ ಎಂಬ ಸೂಚನೆಯಿದೆ. ಇದರ ಹೊರತು ಪಂಚಾಯತ್ ಕಾರ್ಯದರ್ಶಿ ಸಹಿತ ಇಲ್ಲಿಂದ ಹೊಯ್ಗೆ ಸಂಗ್ರಹಿಸಲು ಅನುಮತಿ ನೀಡಿದ ಸರಕಾರಿ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈ ವರ್ಷದ  ಶಿರಿಯದ ಹೊಯ್ಗೆ ವ್ಯಾಪಾರ ಹರಾಜಿನಲ್ಲಿ ಪಂಚಾಯತ್‌ನ ಭ್ರಷ್ಟಾಚಾರ ಹಾಗೂ ಕಾನೂನು ವಿರುದ್ಧ ಕ್ರಮಗಳನ್ನು ತಿಳಿಸಿ ಕುಂಬಳೆ ತ್ವಾಫ್ ಮಂಜಿಲ್‌ನ ಅಬ್ಬಾಸ್ ಜಾಫರ್ ಸಲ್ಲಿಸಿದ ದೂರಿನ ಮೇರೆಗೆ ಹೊಯ್ಗೆ ಸಂಗ್ರಹಕ್ಕೆ ಸಂಬಂಧಪಟ್ಟ ಕೇಂದ್ರ- ರಾಜ್ಯ ಸರಕಾರಿ ಇಲಾಖೆಗಳಿಂದ ಅನುಮತಿ ಲಭಿಸಿದ್ದಲ್ಲಿ ಅದನ್ನು ಮುಂದಿನ ಕೇಸಿನ ವಿಚಾರಣೆ ವೇಳೆ ಹಾಜರುಪಡಿಸು ವಂತೆಯೂ ಅದುವರೆಗೆ ಶಿರಿಯದಿಂದ ಹೊಯ್ಗೆ ಸಂಗ್ರಹಿಸುವುದೋ ಅಥವಾ ಅದಕ್ಕಾಗಿ ಯಾವುದಾದರೂ ಸಿದ್ಧತೆ ನಡೆಸಕೂಡದೆಂದೂ ಪಂಚಾಯತ್‌ಗೆ ನಿರ್ದೇಶ ನೀಡಲಾಗಿದೆ. ಶಿರಿಯ ಹೊಳೆ ಈಗಿನ ಸ್ಥಿತಿಯಲ್ಲೇ ಇರಬೇಕೆಂದೂ, ಅದರಲ್ಲಿ ಯಾವುದೇ ಬದಲಾವಣೆ ಉಂಟಾಗಕೂಡದೆಂದು ನ್ಯಾಯಾಲಯ ಮುನ್ನೆಚ್ಚರಿಕೆಯನ್ನೂ  ನೀಡಿದೆ. ಕುಂಬಳೆ ಪಂಚಾಯತ್‌ನ ವಿವಿಧ ಹೊಯ್ಗೆ ಕಡವುಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯಿಲ್ಲದೆ ಕೋಟ್ಯಂತರ ರೂಪಾಯಿಗಳ ಹೊಯ್ಗೆ  ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವಿಕ್ರಂ ಪೈ ಈ ಮೊದಲೇ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕಕ್ಷಿದಾರನಾಗಿ ಸೇರಲು ಅವರು ನ್ಯಾಯಾ ಲಯದ ಅನುಮತಿ ಯಾಚಿಸಿದ್ದಾರೆ.

ಪಂಚಾಯತ್‌ನ ಶಿರಿಯದ ಹೊಯ್ಗೆ ವ್ಯಾಪಾರ ವಿರುದ್ಧ ಅಬ್ಬಾಸ್ ನೀಡಿದ ದೂರಿನಲ್ಲಿ ಹೊಸದಿಲ್ಲಿಯ ಪರಿಸರ ಸಚಿವಾಲಯದ ಡೈರೆಕ್ಟರ್, ಮೀನು- ಬಂದರು ಇಲಾಖೆ ಕಾರ್ಯದರ್ಶಿ, ಕೇರಳ ಕರಾವಳಿ ಮೆನೇಜ್‌ಮೆಂಟ್ ಅಥೋರಿಟಿ ಮೆಂಬರ್ ಸೆಕ್ರೆಟರಿ, ಚೀಫ್ ಎಕ್ಸಿ ಕ್ಯೂಟಿವ್ ಆಫೀಸರ್, ಕೇರಳ ಮಾರಿಟೈಂ ಬೋರ್ಡ್ ಚೀಫ್ ಎಕ್ಸಿಕ್ಯೂ ಟಿವ್ ಆಫೀಸರ್, ಕಾಸರಗೋಡು ಫೋರ್ಟ್ ಕನ್ಸರ್ವೇಟರ್, ಕಣ್ಣೂರು ಅಳಿಕ್ಕಲ್ ಪೋರ್ಟ್ ಆಫೀಸರ್, ಕಾಞಂಗಾಡ್‌ನ ಕೇರಳ ಸ್ಟೇಟ್ ಮಾಲಿನ್ಯ ನಿಯಂತ್ರಣ ಮಂಡಳಿ ಇಂಜಿನಿಯರ್, ಕಾಸರಗೋಡು ಜಿಲ್ಲಾಧಿಕಾರಿ, ಕುಂಬಳೆ ಪಂಚಾಯತ್ ಕಾರ್ಯದರ್ಶಿ ಎಂಬಿವರು ಪ್ರತಿವಾದಿಗಳಾಗಿದ್ದಾರೆ.

ಪರಿಸರ ಇಲಾಖೆ ಹಾಗೂ ಕೇರಳ ಕೋಸ್ಟಲ್ ಮೆನೇಜ್‌ಮೆಂಟ್ ಅಥೋರಿಟಿಯ ಅನುಮತಿ, ಅಂಗೀಕಾರ ವಿಲ್ಲದೆ ಶಿರಿಯ ಹೊಳೆಯ ಅಳಿವೆಬಾಗಿ ಲಿನಿಂದ ಹೊಯ್ಗೆ ಸಂಗ್ರಹಿಸುತ್ತಿರುವು ದಾಗಿ ಕೇರಳ ಕರಾವಳಿ ಮೆನೇಜ್ ಮೆಂಟ್ ಅಥೋರಿಟಿ ಮೆಂಬರ್ ಸೆಕ್ರೆಟರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪರಿಸರ ಕ್ಲಿಯರೆನ್ಸ್, ಕಡವು ಕಾರ್ಯಾಚರಿಸಲು ನೀಡಿದ ಅನುಮತಿಗೆ ಸಂಬಂಧಿಸಿ ನ್ಯಾಯಾಲಯ ನಿರ್ಧಾರವನ್ನು ಮುಂದಕ್ಕೆ ಘೋಷಿಸಲಿದೆ. ಪ್ರಕರಣದ ೯ನೇ ಪ್ರತಿವಾದಿಯಾದ ಕುಂಬಳೆ ಗ್ರಾಮ ಪಂಚಾಯತ್ ಶಿರಿಯ ಅಳಿವೆಬಾಗಿಲಿನಲ್ಲಿ ಡ್ರಜ್ಜಿಂಗ್ ನಡೆಸುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೆ ಇದನ್ನು ನಡೆಸಲಾಗುತ್ತಿದೆ ಎಂದು ದೂರುಗಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದ್ದರಿಂದ ಶಿರಿಯ ಹೊಳೆಯಲ್ಲಿ ಡ್ರಜ್ಜಿಂಗ್ ನಡೆಸಲು 9ನೇ ಪ್ರತಿವಾದಿಯಾದ ಪಂಚಾಯತ್‌ಗೆ ಯಾವುದೇ ಕಾರಣದಿಂದಲೂ ಅನುಮತಿ ನೀಡಕೂಡದೆಂದು ಅವರು ನ್ಯಾಯಾಲಯದೊಂದಿಗೆ ಆಗ್ರಹಪಟ್ಟಿದ್ದಾರೆ. ಆದರೆ 9ನೇ ಪ್ರತಿವಾದಿಯಾದ ಕುಂಬಳೆ ಪಂಚಾಯತ್‌ಗೆ ಯಾರಿಂದಲೂ ಪೂರ್ವ ಅನುಮತಿ ಅಗತ್ಯವಿಲ್ಲವೆಂದೂ, ಕೇರಳ ಮಾರಿಟೈಂ ಬೋರ್ಡ್‌ನಿಂದ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲವೆಂದು ಪಂಚಾಯತ್ ನ್ಯಾಯಾಲಯದಲ್ಲಿ ವಾದಿಸಿದೆ.

ಜಲಸಾರಿಗೆಯ ಉಳಿವಿಕೆ ಹಾಗೂ ನೀರು ಹರಿದು ಹೋಗಲು, ಹಡಗು ಸಂಚಾರ, ಬಂದರು ಸಾರಿಗೆ, ಕೋಸ್ಟ್‌ಗಾರ್ಡ್ ಪೋರ್ಟ್ ಎಂಬಿವುಗಳಿಗಾಗಿ ಅಳಿವೆಬಾಗಿಲನ್ನು  ಡ್ರಜ್ಜಿಂಗ್ ನಡೆಸಬೇಕಾಗಿದೆ. ಆದರೆ ಶಿರಿಯ ಅಳಿವೆಬಾಗಿಲಿನ ಮೂಲಕ ಹಡಗು ಅಥವಾ ಬೋಟ್ ಇದುವರೆಗೆ ಹಾದು ಹೋಗಿಲ್ಲವೆಂದೂ, ಸಮೀಪ ಕಾಲದಲ್ಲಿ ಇದಕ್ಕೆ ಸಾಧ್ಯತೆಯೂ ಇಲ್ಲವೆಂದು ದೂರುಗಾರ ತಿಳಿಸಿದ್ದಾರೆ. ಅಥವಾ ಈ ಅನುಮತಿ ಪಂಚಾಯತ್‌ಗೆ ಲಭಿಸಿದ್ದಲ್ಲಿ ಅದರ ದಾಖಲೆಗಳನ್ನು ಹಾಜರುಪಡಿಸಲು ನ್ಯಾಯಾಲಯ ಪಂಚಾಯತ್‌ಗೆ ನಿರ್ದೇಶಿಸಿದೆ. ಅಧಿಕಾರಿಗಳ ಯಾವುದೇ ಅನುಮತಿ ಬಂದರಿನಿಂದ ಹೊಯ್ಗೆ ಸಂಗ್ರಹಿಸಲು ಅಗತ್ಯವಿಲ್ಲವಾದಲ್ಲಿ ಆ ಬಗ್ಗೆ ದಾಖಲೆ ಸಲ್ಲಿಸುವಂತೆಯೂ ನ್ಯಾಯಾಲ ಯ ಪಂಚಾಯತ್‌ಗೆ ತಿಳಿಸಿದೆ. ೯ ವರ್ಷಗಳಿಂದ ಶಿರಿಯ ಅಳಿವೆಬಾಗಿಲಿ ನಿಂದ ಕೋಟ್ಯಂತರ ರೂಪಾಯಿಗಳ ಹೊಯ್ಗೆ ಪಂಚಾಯತ್ ಸಂಗ್ರಹಿಸಿರುವುದಾಗಿಯೂ ದೂರುಗಾರ ಆರೋಪಿಸಿದ್ದಾರೆ. ಕಡವು ಚಟುವಟಿಕೆ ಆರಂಭಿಸುವಾಗ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಅಗತ್ಯವಿದೆ ಯೆಂದೂ, ಆದರೆ ಕಡವು ಚಟುವಟಿಕೆ 2025 ಎಪ್ರಿಲ್‌ನಿಂದ ನಡೆಯುತ್ತಿಲ್ಲ ವೆಂದು ಪಂಚಾಯತ್ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಕಾರ್ಯಾಚರಿಸದ ಕಡವಿನ ನೌಕರರಿಗೆ ಪ್ರತೀ ತಿಂಗಳು ಪಂಚಾಯತ್ ವೇತನ ನೀಡುತ್ತಿದೆ ಎಂದೂ, ಕಡವು ಕಾರ್ಯಾಚರಿಸದಿದ್ದಲ್ಲಿ ತಾತ್ಕಾಲಿಕ ನೌಕರರಿಗೆ  ಯಾಕಾಗಿ ವೇತನ ನೀಡಲಾಗುತ್ತಿದೆ ಎಂದು ದೂರುಗಾರ ಪ್ರಶ್ನಿಸಿದ್ದಾರೆ. ದೂರಿಗೆ ಸಂಬಂಧಿಸಿ ಪಂಚಾಯತ್‌ಗೆ ಯಾವುದಾದರೂ ಸ್ಪಷ್ಟೀಕರಣ ಅಥವಾ ದೂರಿನ ವಿರುದ್ಧ ಪುರಾವೆಗಳಿದ್ದಲ್ಲಿ ಮುಂದಿನ ತಿಂಗಳ ೯ರಂದು ನಡೆಯುವ ಹಿಯರಿಂಗ್‌ನಲ್ಲಿ ಹಾಜರುಪಡಿಸಲು ನ್ಯಾಯಾಲಯ ಪಂಚಾಯತ್‌ಗೆ ನಿರ್ದೇಶಿಸಿದೆ.

ವಿವಿಧ ಸರಕಾರಿ ವಿಭಾಗಗಳ ಅನುಮತಿ ಅಥವಾ ಅಂಗೀಕಾರ ಕಡವು ಚಟುವಟಿಕೆಗೆ ಲಭಿಸಿದ್ದಲ್ಲಿ ಅದನ್ನು ಹಾಗೂ  ಇಂತಹ ಅನುಮತಿಗಳು ಪಂಚಾಯತ್‌ಗೆ ಅಗತ್ಯವಿಲ್ಲದಿದ್ದಲ್ಲಿ ಆ ಸಂಬಂಧ ದಾಖಲೆಯನ್ನು  ಅಂದು ಹಾಜರುಪ ಡಿಸಬೇಕೆಂದು ಪಂಚಾಯತ್‌ಗೆ ನ್ಯಾಯಾಲಯ ನಿರ್ದೇಶ ನೀಡಿದೆ. ಅರ್ಜಿದಾರನ ಪರವಾಗಿ ಹೈಕೋರ್ಟ್‌ನ ಪ್ರಮುಖ ಹಿರಿಯ ನ್ಯಾಯವಾದಿಗಳಾದ  ಕೆ. ರಾಜೇಶ್ ಕಣ್ಣನ್ ಹಾಗೂ ಪ್ರವೀಣ್ ಕೆ. ಪಿಳ್ಳೆ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.

ಶಿರಿಯ ಹೊಳೆ ಹಾಗೂ ಆರಿಕ್ಕಾಡಿ ಹೊಳೆ ಸಂಗಮಿಸುವ ಶಿರಿಯ ಅಳಿವೆಬಾಗಿಲಿಗೆ ಇದುವರೆಗೆ ಹಡಗುಗಳೋ, ಬೋಟ್‌ಗಳೋ ತಲುಪಿಲ್ಲ. ಮಾತ್ರವಲ್ಲ ಸಮೀಪ ಕಾಲದಲ್ಲಿ ಇವು ಅಳಿವೆಬಾಗಿಲಿಗೆ ತಲುಪಲು ಸಾಧ್ಯತೆ ಇಲ್ಲದಿರುವಾಗ ಇಂತಹ ಜಲಯಾನಗಳು ಹಾದುಹೋಗುವ ರಾಜ್ಯದ ಬೇರೆ ಯಾವುದೋ ಬಂದರಿಗೆ ಅವುಗಳ ಜಲಸಾರಿಗೆಯಲ್ಲಿ ತಡೆಯಾಗುವ ಮಣ್ಣನ್ನು ತೆರವುಗೊಳಿಸಲು ನೀಡಿದ ನಿರ್ದೇಶದ ಮರೆಯಲ್ಲಿ ಶಿರಿಯ ಹಾಗೂ ಅಳಿವೆಬಾಗಿಲಿನಿಂದ ಹೊಯ್ಗೆ ಸಂಗ್ರಹಿಸಲು ಕಾಸರಗೋಡು ಪೋರ್ಟ್ ಕನ್ಸರ್ವೇಟರ್ ಪಂಚಾಯತ್‌ಗೆ ಹೊಯ್ಗೆ ಸಂಗ್ರಹಿಸಲು ಅನುಮತಿ ನೀಡಿರುವುದಾಗಿಯೂ ದೂರಲಾಗಿದೆ. ಆದರೆ ಅದಕ್ಕಾಗಿ ಇಲ್ಲಿ ಇ-1ಎ ಅಧ್ಯಯನ ನಡೆಸಿಲ್ಲ. ಪರಿಸರ ಅನುಮತಿ ಕೂಡಾ ಲಭಿಸಿಲ್ಲವೆಂದು ಪೋರ್ಟ್ ಕನ್ಸರ್ವೇಟರ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಜಿಲ್ಲೆಯ ಪ್ರಮುಖ ಹೊಯ್ಗೆ ಮಾಫಿಯಾಗಳು ಇದರ ಹಿಂದಿದ್ದಾರೆಂದೂ ಆರೋಪಗಳಿವೆ. ಹೊಯ್ಗೆ ಸಂಗ್ರಹ ನಿಯಂತ್ರಿಸಲು ಕಡವಿನ ಸಮೀಪ ಪಂಚಾಯತ್ ಆರಂಭಿಸಿದ  ಕಚೇರಿ ಬೆಳಿಗ್ಗೆ ೧೦ ಗಂಟೆಗೆ ತೆರೆಯುತ್ತಿದೆ. ಇದೇ ವೇಳೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಇಲ್ಲಿ ಹೊಯ್ಗೆ ಸಂಗ್ರಹಿಸುತ್ತಿರುವುದಾಗಿ ಆರೋಪಗಳಿವೆ. ಆದಿತ್ಯವಾರ ಹೊರತುಪಡಿಸಿ ಇತರೆಲ್ಲಾ ದಿನಗಳಲ್ಲಿ ಕಡವು ಕಾರ್ಯಾಚರಿಸಲು ಪಂಚಾಯತ್ ಅನುಮತಿ ನೀಡಿದೆ.

ಪಂಚಾಯತ್‌ಗೆ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟುಮಾಡಿ, ಪರಿಸರಕ್ಕೆ ಭಾರೀ ಹಾನಿಯುಂಟಾಗಲು ಸಾಧ್ಯತೆಯಿರುವಾಗ ಶಿರಿಯ ಹೊಯ್ಗೆ ಕೊಳ್ಳೆಯ ಕುರಿತು ಹಾಗೂ ಆ ಬಗ್ಗೆ ಗಂಭೀರ ಪ್ರಕರಣದ ಕುರಿತು ಪಂಚಾಯತ್ ಆಡಳಿತ ಸಮಿತಿಗೆ ಪಂಚಾಯತ್ ಅಧಿಕಾರಿಗಳು ಇದುವರೆಗೆ ತಿಳಿಸಿಲ್ಲವೆಂದೂ ಆರೋಪಗಳಿವೆ. ಈ ವಿಷಯಗಳನ್ನು ಅಜೆಂಡಾದಲ್ಲಿ ಇರಿಸಬೇಕೆಂದು ಕೆಲವು ಸದಸ್ಯರು ಆಗ್ರಹಪಟ್ಟರೂ ಅಧಿಕಾರಿಗಳು ಅದನ್ನು ಅವಗಣಿಸಿದ್ದಾರೆಂದೂ ಆರೋಪಗಳಿವೆ.

You cannot copy contents of this page