ಕೆಸರುಗದ್ದೆಯಂತಾದ ದರ್ಭೆತ್ತಡ್ಕ-ಕುಂಜಾರು ರಸ್ತೆ: ಸ್ಥಳೀಯರಿಗೆ ಸಂಚಾರ ಸಮಸ್ಯೆ

ಸೀತಾಂಗೋಳಿ: ಕುಂಜಾರು ಪ್ರದೇಶದ ನಿವಾಸಿಗಳು ಸಂಚಾರ ಸಮಸ್ಯೆಯಿಂದ ಬಳಲುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ. ದರ್ಭೆತ್ತಡ್ಕದಿಂದ ಕುಂಜಾರುಗೆ  ತೆರಳುವ ರಸ್ತೆ ಶೋಚನೀಯಗೊಂಡು ಸಂಚಾರವೇ ದುಸ್ತರವಾಗಿದ್ದರೂ ದುರಸ್ತಿಗೆ ಕ್ರಮವುಂಟಾಗುವುದಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಸುಮಾರು 3ಕಿಲೋ ಮೀಟರ್ ದೂರದ ಈ ರಸ್ತೆಯಲ್ಲಿ 100 ಮೀಟರ್‌ನಷ್ಟು ಕಾಂಕ್ರೀಟ್ ಹಾಕಲಾಗಿದ್ದರೂ ಉಳಿದ ಕಡೆ ರಸ್ತೆ ಕೆಸರುಗದ್ದೆಯಂತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಕೂಡಾ ಸ್ಥಳೀಯರಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ.

ಸ್ಥಳೀಯರು ಸೇರಿ ಜಲ್ಲಿಹುಡಿ ತಂದು ಹೊಂಡಗಳಿಗೆ ಹಾಕಿದ್ದರಾದರೂ ಮಳೆ ಹಿನ್ನೆಲೆಯಲ್ಲಿ ಅದು ಕೆಸರಿನೊಂದಿಗೆ ಸೇರಿಕೊಂಡಿದೆ. ಬದಿಯಡ್ಕ ಪಂಚಾಯತ್‌ನ 21ನೇ ವಾರ್ಡ್‌ಗೊಳಪಟ್ಟ ಈ ರಸ್ತೆ ಬಗ್ಗೆ  ಗ್ರಾಮಸಭೆಯಲ್ಲಿ ಈ ಬಗ್ಗೆ ಹಲವು ಬಾರಿ ಸ್ಥಳೀಯರು ಸೂಚಿಸಿದರೂ ಫಲ ಉಂಟಾಗಿಲ್ಲವೆಂದು ದೂರಲಾಗಿದೆ.

ಸುಮಾರು ೧೫ ಕುಟುಂಬಗಳು ಈ ಪ್ರದೇಶದಲ್ಲಿದ್ದು ಅಸೌಖ್ಯ ತಗಲಿದವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕೂಡಾ ಸಮಸ್ಯೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಮಳೆಗಾಲವಾದ ಕಾರಣ ರಸ್ತೆಯಲ್ಲಿ ಕೆಸರು, ನೀರು ಕಟ್ಟಿ ನಿಲ್ಲುತ್ತಿದ್ದು, ನಡೆದಾಡಲು ಕೂಡಾ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ರಸ್ತೆ ದುರಸ್ತಿಗೊಳಿಸಲು ಪಂಚಾಯತ್ ಅಧಿಕಾರಿಗಳು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page