ಕೆಂಪುಕಲ್ಲು ಕ್ವಾರೆಯ ಧೂಳಿನಿಂದ ಸ್ಥಳೀಯರಿಗೆ ಸಂಕಷ್ಟ: ಕುಂಬಳೆ ಬದ್ರಿಯ ನಗರದಲ್ಲಿ ಹಲವಾರು ಮಂದಿಗೆ ಗಂಭೀರ ರೋಗ

ಕುಂಬಳೆ: ಪಂಚಾಯತ್‌ನ ಬದ್ರಿಯನಗರದಲ್ಲಿ ಕಾನೂನು ವಿರುದ್ಧವಾಗಿ ಕಾರ್ಯಾಚರಿಸುವ ಕೆಂಪುಕಲ್ಲು ಕ್ವಾರೆಯ ಧಳಿನಿಂದಾಗಿ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಕೆಮ್ಮು, ತುರಿಕೆಯಿಂದ ಬಳಲು ತ್ತಿರುವುದಾಗಿ ದೂರಿದ್ದಾರೆ. ಈ ಬಗ್ಗೆ ಯಾರಲ್ಲಿ ಪ್ರಶ್ನಿಸಬೇಕೆಂದರಿಯದೆ ಸ್ಥಳೀಯರು ತಮ್ಮ ವಿಧಿ ಎಂದು ಸಮಾಧಾನಹೊಂದಿರುವುದಾಗಿ ಹೇಳಲಾಗುತ್ತಿದೆ. ಅಂಗನವಾಡಿ ರಸ್ತೆ ಪರಿಸರದಲ್ಲಿ ಕಾರ್ಯಾಚರಿಸುವ ಅನಧಿಕೃತ ಕ್ವಾರೆಯಿಂದಿರುವ ಕೆಂಪುಕಲ್ಲಿನ ಧೂಳಿನಿಂದಾಗಿ ೨೦ರಷ್ಟು ಕುಟುಂಬಗಳು ರೋಗಕ್ಕೆ ತುತ್ತಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ.

ವರ್ಷಗಳಿಂದ ಜನವಾಸ ಕೇಂದ್ರದಲ್ಲಿ ಕಾರ್ಯಾಚರಿಸುವ ಅನಧಿಕೃತ ಕೆಂಪುಕಲ್ಲು ಕ್ವಾರೆಗಳು ಸ್ಥಳೀಯರಿಗೆ ಬೆದರಿಕೆ ಸೃಷ್ಟಿಸಿದೆ ಎಂದು ದೂರಲಾಗಿದೆ. ಧೂಳು ಮಕ್ಕಳು ಹಾಗೂ ವಯಸ್ಸಾದವರಲ್ಲಿ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಮನೆ ಹಾಗೂ ಬಾವಿಗಳೆಲ್ಲ ಕೆಂಪುಕಲ್ಲಿನ ಧೂಳಿನಿಂದಾವರಿಸಿ ಕೊಂಡಿದೆ. ಬೆಳಿಗ್ಗೆ ಮನೆಯಲ್ಲಿರುವ ಪಾತ್ರೆಗಳು ಹಾಗೂ  ಮನೆ ಸಾಮಗ್ರಿಗಳಲ್ಲಿ ಧೂಳು ಆವರಿಸಿರುತ್ತದೆ. ಸ್ಥಳೀಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲವೆಂಬ ಆರೋಪವೂ ಇದೆ. ಜನವಾಸ ವಲಯದಲ್ಲಿ ಕ್ವಾರೆ ನಡೆಸುವಾಗ ಪಾಲಿಸಬೇಕಾದ ಯಾವುದೇ ವಿಧದ ಸುರಕ್ಷಾ ಮಾನದಂಡಗಳನ್ನು ಇಲ್ಲಿ ಪಾಲಿಸಲ್ಪಡುತ್ತಿಲ್ಲವೆಂದು ಸ್ಥಳೀಯರು ಆರೋಪಿಸುತ್ತಾರೆ.

ಮನೆಗಳಿಂದ ನಿರ್ದಿಷ್ಟ ಅಂತರ ಪಾಲಿಸಿ ಕ್ವಾರೆಯ ಸುತ್ತ ಸುರಕ್ಷಾ ಬಲೆಯನ್ನು ಹಾಕಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಒಪ್ಪಿಗೆಯನ್ನು ಲಿಖಿತವಾಗಿ ಪಡೆದ ಬಳಿಕವೇ ಕೆಂಪುಕಲ್ಲು ಕ್ವಾರೆ ಕಾರ್ಯಾಚರಿಸಬೇಕೆಂಬ ಕಾಯ್ದೆ ಜ್ಯಾರಿಯಲ್ಲಿದ್ದರೂ ಇಲ್ಲಿ ಅದ್ಯಾವುದೂ ಅನ್ವಯವಾಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಮುಂಜಾನೆ 4 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲವೊಮ್ಮೆ ರಾತ್ರಿ ಕಾಲಗಳಲ್ಲೂ ಕ್ವಾರೆ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ಕುಂಬಳೆ ಪಂಚಾಯತ್ ಜಿಯೋಲಜಿ ಇಲಾಖೆ, ವಿಲ್ಲೇಜ್ ಆಫೀಸ್,  ತಹಶೀಲ್ದಾರ್, ಜಿಲ್ಲಾಧಿಕಾರಿ ಎಂಬಿವರಿಗೆ ಸ್ಥಳೀಯರು ದೂರು ನೀಡಿದ್ದರೂ ಯಾರೂ ಕೂಡಾ ಅತ್ತ ತಿರುಗಿ ನೋಡಿಲ್ಲವೆಂದು ಹೇಳಲಾಗುತ್ತಿದೆ. ಸರಕಾರಿ ನೌಕರರು ಹಾಗೂ ಕ್ವಾರೆ ಮಾಲಕರ ಮಧ್ಯೆ ಆಂತರಿಕ ಬಾಂಧವ್ಯವಿದೆ ಎಂದು ಇಲ್ಲಿಯವರು ದೂರುತ್ತಾರೆ. ರಾಜಕೀಯದವರು ಕೂಡಾ ಈ ಬಗ್ಗೆ ಮೌನ ವಹಿಸಿರು ವುದಾಗಿ ಸ್ಥಳೀಯರು ದೂರಿದ್ದಾರೆ.

You cannot copy contents of this page