ಅತೀವ ಭದ್ರತೆ ಹೊಂದಿದ ಸೇನಾ ಶಿಬಿರದಿಂದ 2 ಕೋಟಿ ರೂ. ಮೌಲ್ಯದ ಆನೆ ದಂತ ಕಳವು

ತಿರುವನಂತಪುರ: ಅತೀವ ಭದ್ರತೆ ಹೊಂದಿರುವ ತಿರುವನಂತಪುರದ ಪಾಂಙೋಟ್ ಸೇನಾ ಶಿಬಿರದಿಂದ ಸುಮಾರು 2 ಕೋಟಿ ರೂ. ಮೌಲ್ಯವಿರುವ ಆನೆ ದಂತಗಳನ್ನು ಕಳವುಗೈದ ಘಟನೆ ನಡೆದಿದೆ.

ಪ್ರಸ್ತುತ ಸೇನಾ ಶಿಬಿರದ ಆಫೀಸರ್ಸ್ ಕ್ಲಬ್‌ನಲ್ಲಿ ಈ ಎರಡು ಆನೆದಂತಗಳನ್ನು ಭದ್ರತಾ ಕೊಠಡಿಯಲ್ಲಿರಿಸಲಾಗಿತ್ತು. 1929 ರಲ್ಲಿ ಭಾರತೀಯ ಸೇನಾ ಪಡೆಗೆ ಹಸ್ತಾಂತರಿಸಿದ ಆನೆ ದಂತ ಇದಾಗಿತ್ತು.  ಇದೂ ಸೇರಿದಂತೆ ಹಲವು ಭಾರೀ ಮೌಲ್ಯದ ಸಾಮಗ್ರಿಗಳನ್ನು  ಪ್ರಸ್ತುತ ಶಿಬಿರದ ಸ್ಟ್ರಾಂಗ್ ರೂಂನಲ್ಲಿರಿಸಲಾಗಿತ್ತು.

ಮೊನ್ನೆ ರಾತ್ರಿ ಈ ಶಿಬಿರದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊ ಳ್ಳಲಾಗಿತ್ತು. ಇದರಲ್ಲಿ ಆಹಾರ ವಿತರಣೆ  ಹಾಗೂ  ಲೈಟ್  ಸೆಟ್ಟಿಂಗ್ ಸೌಕರ್ಯ ಏರ್ಪಡಿಸಲು  ಹೊರಗಿನಿಂದ 18 ಮಂದಿ ಶಿಬಿರಕ್ಕೆ  ತಲುಪಿದ್ದರು. ಕಾರ್ಯಕ್ರಮ ಮುಗಿದ ಬಳಿಕವಷ್ಟೇ ಆನೆ ದಂತಗಳು ನಾಪತ್ತೆಯಾದ ವಿಷಯ ಶಿಬಿರದ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆ ಬಗ್ಗೆ ಸೇನಾ ಶಿಬಿರದ ಅಧಿಕಾರಿಗಳು ಡಿಐಜಿಗೆ ನೀಡಿದ ದೂರಿನಂತೆ ಪೂಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಶಿಬಿರದೊಳಗೆ ಬಂದ ಬಾಹ್ಯ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಮಾತ್ರವಲ್ಲದೆ ಮಿಲಿಟರಿ ಗುಪ್ತಚರ ವಿಭಾಗವೂ ಇನ್ನೊಂದೆಡೆ ಸಮಾನ ತನಿಖೆ ಆರಂಭಿಸಿದೆ. ಈ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು  ಪೊಲೀಸರು ಪರಿಶೀಲಿಸುತ್ತಿದ್ದಾರೆ. 

RELATED NEWS

You cannot copy contents of this page