ಮನೆಯ ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ ದ್ವೇಷ: 50 ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್ ನಾಶಪಡಿಸಿ ಯುವಕನಿಂದ ಪ್ರತಿಕಾರ

ಕಾಸರಗೋಡು: ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಫ್ಯೂಸ್ ತೆಗೆದ ಕೆಎಸ್‌ಇಬಿಗೆ ವಿಚಿತ್ರವಾದ ತಿರುಗೇಟು ಯುವಕ ನೀಡಿದ್ದಾನೆ. ಕಾಸರಗೋಡು ನಗರದ ವಿವಿಧ ಭಾಗಗಳ ಫ್ಯೂಸ್ ತೆಗೆದು ಯುವಕ ಇದಕ್ಕೆ ಪ್ರತಿಕಾರ ನೀಡಿದ್ದಾನೆ. ಘಟನೆಯಲ್ಲಿ ಚೂರಿ ನಿವಾಸಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ನೆಲ್ಲಿಕುಂಜೆ, ಕಾಸರಗೋಡು ಸೆಕ್ಷನ್‌ಗಳ ಫ್ಯೂಸ್‌ಗಳನ್ನು ಈತ ತೆಗೆದಿದ್ದಾನೆ. ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ಮನೆಯ ಸಂಪರ್ಕವನ್ನು ಕೆಎಸ್‌ಇಬಿ ವಿಚ್ಛೇಧಿಸಿದ ದ್ವೇಷದಿಂದ ನಗರದ 50 ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್ ಯುವಕ ಹಾನಿಗೊಳಿಸಿದ್ದಾನೆ. ಇದರಿಂದಾಗಿ ವ್ಯಾಪಾರ ಸಂಸ್ಥೆಗಳು ಸಹಿತದ 8000ಕ್ಕೂ ಅಧಿಕ ಫಲಾನುಭವಿಗಳು ಎರಡು ಗಂಟೆ ವಿದ್ಯುತ್ ಇಲ್ಲದೆ ಪರದಾಡಿದರು. 22,೦೦೦ ರೂ. ಆಗಿತ್ತು ಯುವಕನ ಕಳೆದ ತಿಂಗಳ ವಿದ್ಯುತ್ ಬಿಲ್. 12ರಂದು ಹಣ ಪಾವತಿಸಬೇಕಾದ ಕೊನೆಯ ದಿನಾಂಕವಾಗಿತ್ತು. ನಿನ್ನೆ ಬೆಳಿಗ್ಗೆ ತಲುಪಿದ ವಿದ್ಯುತ್ ಇಲಾಖೆ ನೌಕರರು ಮನೆಯ ಫ್ಯೂಸನ್ನು ತೆಗೆಯುವುದರ ಬದಲಾಗಿ ಕಂಬದಿಂದಿರುವ ಸಂಪರ್ಕವನ್ನು ವಿಚ್ಛೇಧಿಸಿದರು. ಇದರಿಂದ ಯುವಕ ಕೆಎಸ್‌ಇಬಿ ಕಚೇರಿಗೆ ತಲುಪಿ ಜಗಳವಾಡಿದನು. ಬಳಿಕ ಈತ ಹಿಂತಿರುಗಿದ ಬಳಿಕ ವಿದ್ಯುತ್ ಮೊಟಕುಗೊಂಡಿರುವುದಾಗಿ ಹಲವು ಕಡೆಗಳಿಂದ ವಿದ್ಯುತ್ ಕಚೇರಿಗೆ ಫೋನ್ ಕರೆ ಬಂತು. ಈ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಹಲವು ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್‌ಗಳನ್ನು ತೆಗೆದು ನಾಶಪಡಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಫ್ಯೂಸ್ ತೆಗೆಯುವುದನ್ನು ಕಂಡ ಸ್ಥಳೀಯರು ಯುವಕನನ್ನು ತಡೆದಿದ್ದರು. ಈ ಬಗ್ಗೆ ಟೌನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಯುವಕನನ್ನು ಸೆರೆ ಹಿಡಿದು ಪೊಲೀಸ್ ಠಾಣೆಗೆ ಕರೆತರಲಾಗಿದೆ.

You cannot copy contents of this page