ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಗುಪ್ತಚರ ವಿಭಾಗ ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಪರೇಷನ್ ಹಾಟ್‌ಸ್ಪೋಟ್, ಆಪರೇಷನ್ ಸಿ-ಹಂಟ್‌ನಂತೆ ವ್ಯಾಪಕ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಸೇರಿದಂತೆ ಹಲವು ಕೇಂದ್ರಗಳಿಗೆ ಅಬಕಾರಿ ಗುಪ್ತಚರ ವಿಭಾಗ ದಾಳಿ ನಡೆಸಿದೆ. ಇದರಂತೆ ಮಾರ್ಚ್ 16ರಿಂದ ಆರಂಭಗೊಂಡು ಎಪ್ರಿಲ್ 2ರ ತನಕದ ಅವಧಿಯಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 61 ಅಬಕಾರಿ ಪ್ರಕರಣಗಳು, 52 ಮಾದಕದ್ರವ್ಯ ಪ್ರಕರಣಗಳು ಮತ್ತು ನಿಷೇಧಿತ ತಂಬಾಕು ಉತ್ಪನ್ನಕ್ಕೆ ಸೇರಿದ 47 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 27.85 ಲೀಟರ್ ಅಕ್ರಮ ಮದ್ಯ, 1560 ಲೀಟರ್ ಹುಳಿರಸ, 195.52 ಲೀಟರ್ ವಿದೇಶ ಮದ್ಯ, 52.66 ಲೀಟರ್ ಅನಧಿಕೃತ ಮದ್ಯ, 8.45 ಲೀಟರ್ ಬಿಯರ್ ಮತ್ತು 8.270 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ವಶಪಡಿಸಲಾಗಿದೆ. ಇದರ ಹೊರತಾಗಿ 26.078 ಕಿಲೋ ಗಾಂಜಾ, 1362 ಗಾಂಜಾ ಸಸಿಗಳು, 328.404 ಗ್ರಾಂ ಮೆಥಾಫಿಟಮಿನ್, 0.330 ಗ್ರಾಂ ಎಂಡಿಎಂಎ, 2.54 ಗ್ರಾಂ ಬ್ರೌನ್ ಶುಗರ್, 2.06 ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು 54.06 ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ.
ಮಾತ್ರವಲ್ಲ ಅನಧಿಕೃತವಾಗಿ ಮಾದಕದ್ರವ್ಯ ಸಾಗಿಸುತ್ತಿದ್ದ ವೇಳೆ 62.5 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅಬಕಾರಿ ಪ್ರಕರಣಗಳಲ್ಲಿ 39 ಆರೋಪಿಗಳು ಮತ್ತು ಮಾದಕದ್ರವ್ಯ ಪ್ರಕರಣಗಳಲ್ಲಿ 49 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 7 ವಾಹನಗಳನ್ನೂ ವಶಪಡಿಸಲಾಗಿದೆ. ನಿಷೇಧಿತ ತಂಬಾಕು ಉತ್ಪನ್ನ ಸಾಗಾಟ ಪ್ರಕರಣಗಳಿಗೆ ಸಂಬಂಧಿಸಿ 5400 ರೂ. ಜುಲ್ಮಾನೆಯನ್ನೂ ವಶಪಡಿಸಲಾಗಿದೆ.
ಅಬಕಾರಿ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ವಹಿಸುತ್ತಿರುವ ಕಿಶೋರ್ ಕುಮಾರ್‌ರ ನಿರ್ದೇಶ ಪ್ರಕಾರ ರಾಜ್ಯಾದ್ಯಂತವಾಗಿ ಹೆಚ್ಚುವರಿ ಅಬಕಾರಿ ಆಯುಕ್ತ (ಎನ್‌ಫೋರ್ಸ್‌ಮೆಂಟ್) ಎಸ್. ದೇವ ಮೆನೊನ್‌ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗಾಂಜಾ ಕೃಷಿ ನಡೆಸುತ್ತಿರುವ ಹಲವು ಪ್ರದೇಶಗಳನ್ನೂ ಕಾರ್ಯಾಚರಣೆ ವೇಳೆ ಗುರುತಿಸಲಾಗಿದೆ. ಮಾದಕದ್ರವ್ಯ ಮತ್ತು ಮದ್ಯ ಬಚ್ಚಿಡಲು ಸಾಧ್ಯತೆ ಇರುವ ಪ್ರದೇಶಗಳು, ಮದ್ಯ ಮತ್ತು ಮಾದಕದ್ರವ್ಯ ಪ್ರಕರಣಗಳ ಖಾಯಂ ಆರೋಪಿಗಳು, ಜ್ಯಾರಿಯಲ್ಲಿರುವ ವಿವಿಧ ಪ್ರಕರಣಗಳ ಆರೋಪಿಗಳು, ಕಳ್ಳಬಟ್ಟಿ ನಿರ್ಮಾಣ ಕೇಂದ್ರಗಳು, ಸ್ಪಿರಿಟ್ ದಾಸ್ತಾನು ಕೇಂದ್ರಗಳು, ಅಂತಾರಾಜ್ಯ ಬಸ್ ನಿಲ್ದಾಣಗಳು, ಪಾರ್ಸಲ್ ಕೇಂದ್ರಗಳು ಸೇರಿದಂತೆ ಎಲ್ಲೆಡೆಗಳಲ್ಲಿ ಅಬಕಾರಿ ಗುಪ್ತಚರ ವಿಭಾಗ ಈ ಕಾರ್ಯಾಚರಣೆ ನಡೆಸುತ್ತಿದೆ.






