ಕೃಷಿಕ ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ತೋಟಕ್ಕೆ ತೆರಳಿದ ಕೃಷಿಕ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನೆಕ್ರಾಜೆ ಕೃಷ್ಣಕೃಪಾ ನಿವಾಸಿ ಎನ್. ಸುಬ್ಬಣ್ಣ ಆಳ್ವ (82) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ೧ ಗಂಟೆಗೆ ಮನೆ ಬಳಿಯ ತೋಟಕ್ಕೆ ತೆರಳಿದ್ದರು. ಸಂಜೆ 3 ಗಂಟೆ ಯಾದರೂ ಇವರು ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ತೋಟದಲ್ಲಿ ಹುಡುಕಾಡಿದರೂ ಪತ್ತೆಹಚ್ಚಲಾಗಲಿಲ್ಲ. ಇದೇ ವೇಳೆ ಸುಬ್ಬಣ್ಣ ಆಳ್ವರ ಚಪ್ಪಲಿ  ತೋಟದ ಕೆರೆ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಅಗ್ನಿಶಾಮಕದಳಕ್ಕೆ ಮನೆಯವರು ಮಾಹಿತಿ ನೀಡಿದ್ದರು.  ಕೂಡಲೇ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ನೇತೃತ್ವದಲ್ಲಿ ತಲುಪಿದ ಅಗ್ನಿಶಾಮಕದಳ  ಶೋಧ ನಡೆಸಿದಾಗ ಸುಬ್ಬಣ್ಣ ಆಳ್ವ ಕೆರೆಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

 ಈ ಸಂಬಂಧ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ವಸಂತಿ ಎಸ್. ಆಳ್ವ, ಮಕ್ಕಳಾದ ಕೃಷ್ಣವೇಣಿ ಆರ್.ರೈ,  ನ್ಯಾಯವಾದಿ ಮನೋಜ್ ಕುಮಾರ್ ಆಳ್ವ, ಅಳಿಯ ರಾಧಾಕೃಷ್ಣ ರೈ, ಸೊಸೆ ರೂಪಾ ಆಳ್ವ, ಸಹೋದರಿಯರಾದ ಜಯಂತಿ ಎಲ್ ನಾಕ್, ಗಂಗಾರತ್ನ ಜಿ. ಆಳ್ವ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page