ತಿರುವನಂತಪುರ: ಯೋಧನಾದ ಪುತ್ರ ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ತಿಳಿದ ಬೆನ್ನಲ್ಲೇ ತಂದೆ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮರನಲ್ಲೂರ್ ಚೀನಿವಿಳ ಚೆಮ್ಮೋಡ್ ನಿವಾಸಿ ಋಷಿಕೇಶನ್ ನಾಯರ್ (69) ನೇಣು ಬಿಗಿದು ಮೃತಪಟ್ಟವರು. ದೆಹಲಿಯಲ್ಲಿ ಸೈನಿಕನಾಗಿರುವ ಪುತ್ರ ವಿಶಾಖ್ (38) ಕೆಲಸದ ಸ್ಥಳದಲ್ಲಿ ಮೃತಪಟ್ಟ ಬಗ್ಗೆ ನಿನ್ನೆ ಬೆಳಿಗ್ಗೆ 7.30ರ ವೇಳೆ ಮನೆಗೆ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೇ ತಂದೆ ನಾಪತ್ತೆಯಾಗಿದ್ದರು. ಬಳಿಕ ನಡೆಸಿದ ಹುಡುಕಾಟದಿಂದ ಮನೆ ಸಮೀಪದ ರಬ್ಬರ್ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೂಡಲೇ ಸಂಬಂಧಿಕರು ಆಸ್ಪತ್ರೆಗೆ ಕೊಂಡೊಯ್ದರಾದರೂ ಆ ವೇಳೆಗೆ ಮೃತಪಟ್ಟಿದ್ದರು.
ವಿಶಾಖ್ನ ಮೃತದೇಹವನ್ನು ಊರಿಗೆ ತಲುಪಿಸಿದ ಬಳಿಕ ಇವರಿಬ್ಬರ ಅಂತ್ಯಕ್ರಿಯೆ ನಡೆಯಲಿದೆ. ಋಷಿಕೇಶನ್ ಪತ್ನಿ ತಂಗಮಣಿ, ಪುತ್ರಿ ಕಾರ್ತಿಕ, ಅಳಿಯ ಅಜಿತ್, ನಿಧನ ಹೊಂದಿದ ವಿಶಾಖ್ ಪತ್ನಿ ಶ್ರೀಜ, ಮಕ್ಕಳಾದ ದಿವ್ಯದರ್ಶಿನಿ, ಸ್ವಾತಿಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






