ಕಾಸರಗೋಡು: ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಬೆಸ್ತ ನಾಪತ್ತೆಯಾದ ಘಟನೆ ನಡೆದಿದೆ. ಕೊಳತ್ತೂರು ತೊಟ್ಟಿ ನಿವಾಸಿ ಕುಮಾರ್ ಎಂಬವರ ಪುತ್ರ ರಾಮಕೃಷ್ಣನ್ (48) ನಾಪತ್ತೆಯಾದ ಬೆಸ್ತ. ನಿನ್ನೆ ಮುಂಜಾನೆ ಚೆಂಬರಿಕ ಸಮುದ್ರ ದಡದಿಂದ ಸುಮಾರು ಏಳು ಕಿಲೋ ಮೀಟರ್ ನಷ್ಟು ದೂರದಲ್ಲಿ ಸಮುದ್ರದಲ್ಲಿ ಈ ಘಟನೆ ನಡೆದಿದೆ. ರಾಮಕೃಷ್ಣನ್ ಮೇಲ್ಪರಂಬದ ರಾಜನ್, ಕೀಯೂರಿನ ಶಾಫಿ ಎಂಬವರೊಂದಿಗೆ ಶನಿವಾರ ಸಂಜೆ ಮೀನುಗಾರಿಕೆಗಾಗಿ ದೋಣಿಯಲ್ಲಿ ಸಮುದ್ರಕ್ಕಿಳಿದಿದ್ದರು. ರಾತ್ರಿ ಮೀನುಗಾರಿಕೆ ನಡೆಸಿ ಬಳಿಕ ನಿನ್ನೆ ಮುಂಜಾನೆ ಹಿಂತಿರುಗುತ್ತಿದ್ದ ವೇಳೆ ರಾಮಕೃಷ್ಣನ್ ಅಕಸ್ಮಾತ್ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಆಗ ದೋಣಿಯಲ್ಲಿದ್ದವರು ತಕ್ಷಣ ಕಾಸರಗೋಡು ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಕರಾವಳಿ ಪೊಲೀಸರು, ಮೀನುಗಾರಿಕೆ ಇಲಾಖೆಯವರು ಮತ್ತು ಇತರ ಬೆಸ್ತರು ಸಮುದ್ರದಲ್ಲಿ ವ್ಯಾಪಕವಾಗಿ ಶೋಧ ನಡೆಸಿದರೂ ರಾಮಕೃಷ್ಣನ್‌ರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.
ಈ ಬಗ್ಗೆ ಕಾಸರಗೋಡು ಕರಾವಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಐ ಉಣ್ಣಿರಾಜನ್ ಮಣಿಯೇರಿಯವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.







