ಕಾಸರಗೋಡು: ಹನಿಟ್ರಾಪ್ನಲ್ಲಿ ಸಿಲುಕಿಸಿ ಯುವಕನಿಂದ ಹಣ ಎಗರಿಸಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಯುವತಿ ಸೇರಿದಂತೆ ಮೂವರ ವಿರುದ್ಧ ಚಕ್ಕರಕಲ್ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ.
ಹೊಸದುರ್ಗ ನಿವಾಸಿಗಳಾದ ೧೭ರ ಹರೆಯದ ಯುವತಿ, ಇಬ್ರಾಹಿಂ ಸಜ್ಮಲ್ ಅರ್ಶಾದ್ (28), ಮೈಮೂನಾ (51) ಮತ್ತು ಎ.ಕೆ. ಅಬ್ದುಲ್ ಕಲಾಂ (52) ಬಂಧಿತ ಆರೋಪಿಗಳು. ಮೊಬೈಲ್ ಆಪ್ ಮೂಲಕ ಪರಿಚಯಗೊಂಡ ಚಕ್ಕರಕಲ್ ಕೊಯ್ಯೋಡು ನಿವಾಸಿಯಾಗಿರುವ ಯುವಕನೋರ್ವ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ಆಪ್ ಮೂಲಕ ಪರಿಚಯಗೊಂಡ ಯುವತಿಯೋರ್ವೆ ನನ್ನೊಂದಿಗೆ ನಿಕಟಗೊಂಡಳೆಂದೂ, ಬಳಿಕ ನನ್ನನ್ನು ಹೊಸದುರ್ಗಕ್ಕೆ ಬರುವಂತೆ ತಿಳಿಸಿದಳು. ಅದರಂತೆ ನಾನು ಆಕೆ ಹೇಳಿದ ಸ್ಥಳಕ್ಕೆ ಬಂದಾಗ ಆಕೆ ನನ್ನನ್ನು ಮನೆಯೊಂದಕ್ಕೆ ಕರೆದೊಯ್ದಳು. ನಂತರ ಆಕೆ ನನ್ನ ಸಹಚರರನ್ನು ಕರೆದು ನನ್ನ ವಿವಿಧ ರೀತಿಯ ಫೋಟೋಗಳನ್ನು ತೆಗೆದು, ಬೆದರಿಸಿ 10 ಲಕ್ಷ ರೂ. ನೀಡುವಂತೆ ಆಗ್ರಹಿಸಿದರು. ಆಗ ನನ್ನ ಕೈಯಲ್ಲಿ ಹಣವಿಲ್ಲವೆಂದೂ ಊರಿಗೆ ಹೋದ ಬಳಿಕ ಹಣ ನೀಡುವುದಾಗಿ ನಾನು ಅವರಲ್ಲಿ ತಿಳಿಸಿದೆನೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನೆ. ಅದರಂತೆ ಆ ತಂಡದವರು ಚಕ್ಕರಕ್ಕಲ್ಗೆ ಬಂದಾಗ ಆ ಯುವಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದರಂತೆ ಚಕ್ಕರಕ್ಕಲ್ ಠಾಣೆ ಇನ್ಸ್ಪೆಕ್ಟರ್ ಎಂ.ಪಿ ಶಾಜಿ ನೇತೃತ್ವದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ನಾಲ್ವರು ಆರೋ ಪಿಗಳನ್ನು ಅಲ್ಲಿಂದ ಸೆರೆಹಿಡಿದು ಠಾಣೆಗೊಯ್ದು ಬಳಿಕ ಅವರ ಬಂಧನ ದಾಖಲಿಸಿಕೊಂಡರು.







